ನ.9 ರಂದು ಯಾವುದೇ ಸುದ್ದಿ ಪ್ರಸಾರ ಮಾಡದಂತೆ ಎನ್’ಡಿಟಿವಿ ಇಂಡಿಯಾಗೆ ಒಂದು ದಿನದ ನಿಷೇಧ
ನವದೆಹಲಿ ಸೆ. 03 : ಪಠಾಣ್ ಕೋಟ್ ಉಗ್ರರ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಪ್ರಸಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎನ್’ಡಿಟಿವಿ ಇಂಡಿಯಾಗೆ ನ.9 ರಂದು ಯಾವುದೇ ಕಾರ್ಯಕ್ರಮಗಳು, ಸುದ್ದಿ ಪ್ರಸಾರ ಮಾಡದಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಒಂದು ದಿನದ ನಿಷೇಧ ಹೇರಿದೆ. ಜನವರಿ ತಿಂಗಳಿನಲ್ಲಿ ನಡೆಸಲಾದ ಕಾರ್ಯಾಚರಣೆ ವೇಳೆ ಕೆಲ ಸೂಕ್ಷ್ಮ ಮಾಹಿತಿಗಳನ್ನು ವಾಹಿನಿ ಬಹಿರಂಗಪಡಿಸಿತ್ತು. ಪಠಾಣ್ ಕೋಟ್ ವಾಯುನೆಲೆಯಲ್ಲಿದ್ದ ಶಸ್ತ್ರಾಸ್ತ್ರಗಳ ದಾಸ್ತಾನು, ಮಿಗ್, ಯುದ್ಧ ವಿಮಾನಗಳು, ರಾಕೆಟ್ ಉಡಾವಕಗಳು, ಮಾರ್ಟರ್ ಗಳು ಹೆಲಿಕಾಪ್ಟರ್ ಗಳು, ಇಂದನ್ ಟ್ಯಾಂಕ್ ಇತ್ಯಾದಿಗಳ ವಿವರಗಳನ್ನು ವಾಹಿನಿ ಪ್ರಸಾರ ಮಾಡಿತ್ತು. ಒಂದು ವೇಳೆ ಭಯೋತ್ಪಾದಕರು ಈ ಮಾಹಿತಿಗಳನ್ನು ಗಮನಿಸಿದ್ದೇ ಆಗಿದ್ದರೆ, ರಾಷ್ಟ್ರೀಯ ಭದ್ರತೆಗೆ ಮಾತ್ರವಲ್ಲದೆಯೇ ನಾಗರಿಕರ ಹಾಗೂ ರಕ್ಷಣಾ ಸಿಬ್ಬಂದಿಯ ಪ್ರಾಣಗಳಿಗೆ ಭಾರೀ ಹಾನಿಯುಂಟಾಗುತ್ತಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಪ್ರಸಾರ ನಿಯಮ ಉಲ್ಲಂಘನೆ ಮಾಡಿದ ವಾಹಿನಿಗಳ ವಿರುದ್ದ ಸಮಿತಿ ಕ್ರಮಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಶೋಕಾಸ್ ನೋಟಿಸ್ ನ್ನು ವಾಹಿನಿಗೆ ಜಾರಿ ಮಾಡಲಾಗಿದೆ. ಉಗ್ರರ ದಾಳಿಗಳ ಸುದ್ದಿ ಬಿತ್ತರದ ಕುರಿತು ವಾಹಿನಿಯೊಂದರ ವಿರುದ್ಧ ನೀಡಲಾಗುವ ಮೊದಲ ಆದೇಶ ಇದಾಗಲಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಕ್ರಮ ಕುರಿತಂತೆ ಎನ್ ಡಿಟಿವಿ ಪ್ರತಿಕ್ರಿಯೆ ನೀಡಿದ್ದು, ಸುದ್ದಿ ಪ್ರಸಾರವೊಂದು ವಸ್ತುನಿಷ್ಠ ವ್ಯಾಖ್ಯಾನವಾಗಿತ್ತು. ಸಾಕಷ್ಟು ಮಾಹಿತಿಗಳನ್ನು ಪತ್ರಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಬಳಕೆ ಮಾಡಲಾಗಿತ್ತು. ಈ ಮಾಹಿತಿಯನ್ನೇ ನಾವೂ ಕೂಡ ಪ್ರಸಾರ ಮಾಡಿದ್ದೆವೆಂದು ಹೇಳಿಕೊಂಡಿದೆ.