ಪಂಚರಾಜ್ಯ ಫಲಿತಾಂಶದ ನಂತರ ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಮಹೂರ್ತ

Spread the love

Election-Commission

ಬೆಂಗಳೂರು, ಮಾ.5- ಬಹುನಿರೀಕ್ಷಿತ ನಂಜನಗೂಡು-ಗುಂಡ್ಲುಪೇಟೆ ಕ್ಷೇತ್ರಗಳ ಉಪಚುನಾವಣೆ ದಿನಾಂಕ ಪಂಚರಾಜ್ಯ ಚುನಾವಣೆ ಫಲಿತಾಂಶದ ನಂತರ ಪ್ರಕಟವಾಗುವ ಸಾಧ್ಯತೆ ಇದೆ.
ಏಪ್ರಿಲ್ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿಯನ್ನು ಗಮನದಲ್ಲಿರಿಸಿಕೊಂಡು ಚುನಾವಣೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.  ಇಷ್ಟರಲ್ಲಾಗಲೇ ಚುನಾವಣೆ ದಿನಾಂಕ ಪ್ರಕಟವಾಗಬೇಕಿತ್ತು. ಒಂದು ಮೂಲಗಳ ಪ್ರಕಾರ ಪಂಚರಾಜ್ಯಗಳ ಚುನಾವಣೆ ಫಲಿತಾಂಶ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಫಲಿತಾಂಶಕ್ಕೂ, ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಆಯೋಗ ತನ್ನ ಕೆಲಸವನ್ನು ತನ್ನ ಪಾಡಿಗೆ ಮಾಡುತ್ತಿರುತ್ತದೆ. ಆದರೆ ಈವರೆಗೂ ಚುನಾವಣೆ ಘೋಷಣೆಯಾಗದಿರುವುದನ್ನು ಗಮನಿಸಿದರೆ ಕಾಕತಾಳೀಯವಂತೆ ಕಂಡು ಬರುತ್ತದೆ.

ಉಪಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ರಾಜಕೀಯ ಪಕ್ಷಗಳಿಂದ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ. ಸ್ವಾಭಿಮಾನದ ಪ್ರತಿಷ್ಠೆ ಹಾಗೂ ಅನುಕಂಪದ ಅಲೆಯ ಮೇಲೆ ಎರಡೂ ಕ್ಷೇತ್ರಗಳ ಚುನಾವಣೆ ನಡೆಯುತ್ತಿವೆ.  ಕಾಂಗ್ರೆಸ್ ಪಕ್ಷದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಬಿಜೆಪಿ ಸೇರ್ಪಡೆಯಾಗಿ ಚುನಾವಣಾ ಕಣಕ್ಕಿಳಿಯಲಿದ್ದಾರೆ.  ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಸೇರ್ಪಡೆಯಾಗಿರುವ ಕಳಲೆ ಕೇಶವಮೂರ್ತಿ ಅವರನ್ನು ಶ್ರೀನಿವಾಸ್‍ಪ್ರಸಾದ್ ವಿರುದ್ಧ ಕಣಕ್ಕಿಳಿಸಲಿದೆ.

ಸಹಕಾರ ಸಚಿವರಾಗಿದ್ದ ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಅವರ ಪತ್ನಿ ಗೀತಾಪ್ರಸಾದ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.  ಜೆಡಿಎಸ್ ಪಕ್ಷ ಇನ್ನೂ ಅಧಿಕೃತವಾಗಿ ಅಭ್ಯರ್ಥಿಗಳನ್ನು ಹೆಸರನ್ನು ಪ್ರಕಟಿಸಿಲ್ಲ. ಉಪಚುನಾವಣಾ ಕಣ ರಂಗೇರಿದೆ. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಕೆಸರೆರಚಾಟ ಹೆಚ್ಚಾಗಿದೆ.   ಇತ್ತಿಚೆಗೆ ಯಡಿಯೂರಪ್ಪ ಸಿಡಿಸಿದ ಡೈರಿ ಬಾಂಬ್ ಬಿಜೆಪಿಗೆ ಚುನಾವಣಾ ಪ್ರಮುಖ ಅಸ್ತ್ರವಾಗಲಿದೆ. ಅದೇ ರೀತಿ ಅನಂತ್‍ಕುಮಾರ್, ಯಡಿಯೂರಪ್ಪ ನಡೆಸಿರುವ ಸಂಭಾಷಣೆಯ ಸಿ.ಡಿ, ಲೆಹರ್‍ಸಿಂಗ್ ಅವರ ಡೈರಿಯನ್ನು ಕೂಡ ಕಾಂಗ್ರೆಸ್ ಚುನಾವಣೆಯಲ್ಲಿ ಬಳಸಿಕೊಳ್ಳಲಿದೆ.

ಒಟ್ಟಾರೆ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಈ ಉಪಚುನಾವಣೆ ಅತ್ಯಂತ ಪ್ರಮುಖವಾಗಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿದೆ.  ದಿನಾಂಕ ಪ್ರಕಟಣೆಗೆ ಎಲ್ಲಾ ಪಕ್ಷಗಳು ಕಾಯುತ್ತಿವೆ. ಸರ್ಕಾರ ಈ ಎರಡೂ ಕ್ಷೇತ್ರಗಳಿಗೆ ಸಾಕಷ್ಟು ಯೋಜನೆಗಳನ್ನು ಮಂಜೂರು ಮಾಡಿದೆ. ಮತದಾರರನ್ನು ಸೆಳೆಯುವ ಪ್ರಯತ್ನವನ್ನು ಈಗಲೇ ಪ್ರಾರಂಭಿಸಿದೆ.
ಪ್ರತಿಪಕ್ಷದ ನಾಯಕರು ಕೂಡ ಕ್ಷೇತ್ರದ ತುಂಬೆಲ್ಲ ಸಂಚಾರ, ಸಭೆ, ಸಮಾರಂಭಗಳನ್ನು ನಡೆಸುತ್ತಿದ್ದಾರೆ. ಗೆದ್ದವರ ಅವಧಿ ಕೇವಲ ಒಂದು ವರ್ಷವಾದರೂ ಭವಿಷ್ಯದ ರಾಜಕೀಯಕ್ಕೆ ಅತ್ಯಂತ ಮಹತ್ವವಾಗಿರುವ ಈ ಚುನಾವಣೆಗೆ ಕಸರತ್ತುಗಳು ನಡೆಯುತ್ತಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin