ಪಂಜಾಬ್, ಗೋವಾ ರಾಜ್ಯಗಳಲ್ಲಿ ನಾಳೆ ಮತದಾನ : ವ್ಯಾಪಕ ಬಂದೋಬಸ್ತ್

Voting--01

ಚಂಡಿಗಢ/ಪಣಜಿ/ನವದೆಹಲಿ, ಫೆ.3- ನೋಟು ಅಮಾನ್ಯ ಕ್ರಮದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಜನಪ್ರಿಯತೆಯ ಅಳತೆಗೋಲು ಎಂದೇ ಪರಿಗಣಿಸಲಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಮೊದಲ ಹಂತಕ್ಕೆ ಕ್ಷಣಗಣನೆ ಆರಂಭವಾಗಿದೆ. ಪಂಜಾಬ್‍ನ 117 ಹಾಗೂ ಗೋವಾದ 40 ವಿಧಾನಸಭಾ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ವ್ಯಾಪಕ ಬಿಗಿಬಂದೋಬಸ್ತ್ ಮಾಡಲಾಗಿದೆ.   ಪಂಜಾಬ್‍ನ ಬಂಟಿಡಾದಲ್ಲಿ ಮೊನ್ನೆ ಸಂಭವಿಸಿದ ಕಾರು ಸ್ಫೋಟದಲ್ಲಿ ಐವರು ಮೃತಪಟ್ಟು ಅನೇಕರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಸ್ಥಳಗಳು ಮತ್ತು ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಬಂದೋಬಸ್ತ್‍ಗಾಗಿ ಕೇಂದ್ರ ಮೀಸಲು ಪಡೆಗಳ ನೆರವು ಕೋರಲಾಗಿದ್ದು, ಅಹಿತಕರ ಘಟನೆಗಳು ಮರುಕಳಿಸದಂತೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗೋವಾದಲ್ಲೂ ಶಾಂತಿಯುತ ಮತದಾನಕ್ಕಾಗಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ.   ಈ ರಾಜ್ಯಗಳ ಚುನಾವಣೆಗಳು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‍ಗೆ ಸತ್ವಪರೀಕ್ಷೆಯಾಗಿದೆ. ಜೊತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಾಯಕತ್ವದ ಅಮ್ ಆದ್ಮಿ ಪಕ್ಷಕ್ಕೂ (ಎಎಪಿ) ಮಹತ್ವದ್ದು ಎನಿಸಿದೆ. ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ಕಮಲ ಮತ್ತು ಕೈ ಪಕ್ಷಗಳು ಸಾಂಪ್ರದಾಯಿಕ ಎದುರಾಳಿಗಳಾಗಿದ್ದು, ಮೊದಲ ಬಾರಿಗೆ ಅಖಾಡಕ್ಕೆ ಇಳಿದಿರುವ ಅಪ್ ಪ್ರಬಲ ಪ್ರತಿಸ್ಪರ್ಧಿಯಾಗಿರುವುದು ಅಚ್ಚರಿಯ ಬೆಳವಣಿಗೆಯಾಗಿದೆ.
ಉಭಯ ರಾಜ್ಯಗಳ ಚುನಾವಣೆಗಳಿಗೆ ಅಬ್ಬರದ ಪ್ರಚಾರ ಗುರುವಾರ ಅಂತ್ಯಗೊಂಡಿತು. ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಮನೋಹರ್ ಪರಿಕ್ಕರ್, ಅರುಣ್ ಜೇಟ್ಲಿ ಸೇರಿದಂತೆ ಹಲವು ಮುಖಂಡರು ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ ನಡೆಸಿದರು.

ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು, ಅದರ ಸಂಪೂರ್ಣ ಹೊಣೆಗಾರಿಕೆಯನ್ನು ಪಕ್ಷದ ಉಪಾಧ್ಯಕ್ಷರೂ ಆತ ತಮ್ಮ ಪುತ್ರ ರಾಹುಲ್ ಗಾಂಧಿ ಅವರಿಗೆ ವಹಿಸಿದ್ದರು.   ಮಾದಕ ದ್ರವ್ಯ ಪಿಡುಗು, ಭ್ರಷ್ಟಾಚಾರ, ಹಿಂಸಾಚಾರ, ಕಾನೂನು ಮತ್ತು ಸುವ್ಯವಸ್ಥೆ ಮೊದಲಾದ ಜ್ವಲಂತ ವಿಷಯಗಳಲ್ಲಿ ರಾಜಕೀಯ ಪಕ್ಷಗಳ ನಡುವೆ ಪರಸ್ಪರ ಕೆಸರೆರೆಚಾಟಕ್ಕೆ ಈ ರಾಜ್ಯಗಳು ಸಾಕ್ಷಿಯಾಗಿತ್ತು.    ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಪಂಜಾಬ್‍ನಲ್ಲಿ ಕಳೆದೊಂದು ದಶಕದಿಂದ ಅಧಿಕಾರದಲ್ಲಿರುವ ಬಿಜೆಪಿ-ಎಸ್‍ಎಡಿ (ಶಿರೋಮಣಿ ಅಕಾಲಿ ದಳ) ಮೈತ್ರಿಕೂಟ ಹಾಗೂ ಅಧಿಕಾರ ಗುದ್ದುಗೆಗೇರಲು ಕಾಂಗ್ರೆಸ್-ಆಪ್ ಹವಣಿಸುತ್ತಿದೆ.  ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಿದೆ.

ಪಂಜಾಬ್‍ನಲ್ಲಿ ಅಪ್ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಸಂಸದರನ್ನು ಹೊಂದಿದ್ದು, ಎಲ್ಲ 117 ಸ್ಥಾನಗಳಲ್ಲಿ ಸ್ಪರ್ಧಿಸಿದೆ. ಒಂದು ವೇಳೆ ಚುನಾವಣಾ ರಣರಂಗದಲ್ಲಿ ಆಪ್ ಗೆದ್ದರೆ ಭಗವಂತ ಮಾನ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.  ಕರಾವಳಿ ರಾಜ್ಯ ಗೋವಾದಲ್ಲಿ ಆರ್‍ಎಸ್‍ಎಸ್ ವಿಭಜನೆಯಾಗಿದ್ದು, ಬಂಡಾಯದ ಬಿಸಿಯನ್ನು ಬಿಜೆಪಿ ಎದುರಿಸುತ್ತಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರನ್ನು ತನ್ನ ಮುಖ್ಯಮಂತ್ರಿ ಎಂದು ಬಿಜೆಪಿ ಪರಿಗಣಿಸಿಲ್ಲ. ಮನೋಹರ್ ಪರಿಕ್ಕರ್ ಗೋವಾದಲ್ಲಿ ಹೊಂದಿರುವ ಜನಪ್ರಿಯತೆ ಲಾಭಗಳಿಸಲು ಪಕ್ಷವು ಹವಣಿಸುತ್ತಿದೆ. ಪರಿಕ್ಕರ್ ಮುಖ್ಯಮಂತ್ರಿ ಸ್ಥಾನಕೇರುವ ಬಗ್ಗೆ ಬಿಜೆಪಿ ಹಿಂದಿನಿಂದಲೂ ಹೇಳುತ್ತಲೇ ಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin