ಪಕ್ಷದ ಚಿಹ್ನೆಗಾಗಿ ಎಐಎಡಿಎಂಕೆ ನಾಯಕ ದಿನಕರನ್ ನಿಂದ ಆಯೋಗದ ಅಧಿಕಾರಿಗಳಿಗೆ 50 ಕೊಟಿ ಲಂಚ

Dinakarana--01

ನವದೆಹಲಿ, ಏ. 17- ತಮಿಳು ನಾಡಿನ ಆರ್‍ಕೆ ನಗರ ಉಪಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮೂಲ ಚಿಹ್ನೆ (ಎರಡು ಎಲೆ)ಯನ್ನು ತಮಗೆ ನೀಡುವಂತೆ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಭಾರೀ ಮೊತ್ತದ ಲಂಚ ನೀಡಲು ಪ್ರಯತ್ನಿಸಿದ್ದ ಆರೋಪದಡಿ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದನಕರನ್ ಅವರನ್ನು ದೆಹಲಿ ಅಪರಾಧ ವಿಭಾಗದ ಪೊಲೀಸರು ಸಮಸ್ ನೀಡಲು ಮುಂದಾಗಿದ್ದಾರೆ . ಚುನಾವಣಾ ಆಯೋಗವನ್ನೇ ಭ್ರಷ್ಟಗೊಳಿಸಲು ಮುಂದಾಗಿದ್ದ  ದಿನಕರನ್ ಚಾರ್ಜ್ ಶೀಟ್ ದಾಖಲಿಸಿದ   ಹಿನ್ನೆಲೆಯಲ್ಲಿ ಪ್ರಸಕ್ತ ತಮಿಳುನಾಡಿನ, ವಿಶೇಷವಾಗಿ ಎಐಎಡಿಎಂಕೆ ವಲಯದಲ್ಲಿ ಭಾರೀ ಸಂಚಲನ ಉಂಟಾಗಿದೆ. ಒಂದುಕಡೆ ಮತದಾರರಿಗೆ ನೂರು ಕೋಟಿಗೂ ಹೆಚ್ಚು ಹಣ ಹಂಚುವಾಗ ಸಿಕ್ಕಿಬಿದ್ದ ಸಚಿವ, ಇನ್ನೊಂದೆಡೆ ಚುನವಣಾ ಆಯೋಗಕ್ಕೇ ಲಂಚ ನೀಡಲು ಹೋಗಿ ಸಿಕ್ಕಿಬಿದ್ದಿರುವ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಅಭ್ಯರ್ಥಿ ದಿನಕರನ್ ಪ್ರಕರಣಗಳಿಂದಾಗಿ ಶಶಿಕಲಾ ಬಣ ಭಾರೀ ಒತ್ತಡದಲ್ಲಿ ಸಿಲುಕಿದಂತಾಗಿದೆ.


ಪ್ರಸ್ತುತ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಎಐಎಡಿಎಂಕೆಯ ಒಂದು ಬಣದ ನಾಯಕಿಯಾಗಿರುವ ವಿ ಕೆ. ಶಶಿಕಲಾ ಅವರ ಸಂಬಂಧಿಯಾಗಿರುವ ದಿನಕರನ್ ಹಾಗೂ ಪ್ರಕರಣದ ಮಧ್ಯವರ್ತಿ ಸುಕೇಶ್ ಚಂದ್ರಶೇಖರ್ ಅವರನ್ನು ನಿನ್ನೆ ತಡರಾತ್ರಿ ಪೊಲೀಸರು ಬಂಧಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಯಲಲಿತಾ ನಿಧನದ ನಂತರ ತಮಿಳುನಾಡಿನಲ್ಲಿ ಉಂಟಾದ ರಾಜಕೀಯ ಅಸ್ತಿರತೆ ಸಂದರ್ಭದ ಲಾಭ ಪಡೆಯಲು ಮುಂದಾದ ಜಯಾ ಆಪ್ತೆ ವಿ.ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆ ಪಕ್ಷದ ಆಯ ಕಟ್ಟಿನ ಸ್ಥಳಗಳಿಗೆ ತಮ್ಮ ಸಂಬಂಧಿಗಳನ್ನೇ ನೇಮಕ ಮಾಡಿ ಆದೇಶ ಹೊರಡಿಸಿದ್ದರು. ಈ ವೇಳೆಯೇ ತಮ್ಮ ಸಹೋದರರ ಸಂಬಂಧಿ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆಯ ಉಪಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಮಾಜಿ ಮುಖ್ಯಮಂತ್ರಿ ಒ.ಪನ್ನೀರ್‍ಸೆಲ್ವಂ ಬಣದ ವಿರುದ್ಧ ಕತ್ತಿ ಮಸೆಯುತ್ತಿದ್ದ ಶಶಿಕಲಾ ಹೇಗಾದರು ಮಾಡಿ ಪಕ್ಷದ ಚಿನ್ಹೆಯನ್ನು ತಮ್ಮ ಬಣಕ್ಕೆ ಪಡೆಯುವ ಜವಾಬ್ದಾರಿಯನ್ನು ದಿನಕರನ್‍ಗೆ ವಹಿಸಿದ್ದರು.

ಎಐಎಡಿಎಂಕೆ ಪಕ್ಷದ ಎರಡೆಲೆ ಚಿಹ್ನೆಯನ್ನು ತಮ್ಮ ಬಣಕ್ಕೆ ಪಡೆಯಲು ಮಧ್ಯವರ್ತಿಯಾಗಿದ್ದ ಸುಕೇಶ್ ಚಂದ್ರಶೇಖರ್ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಬರೋಬ್ಬರಿ 50 ಕೋಟಿ ರೂ. ಲಂಚ ನೀಡಲು ವ್ಯವಹಾರ ಕುದುರಿಸಲು ಮುಂದಾಗಿದ್ದ. ಸದ್ಯ ಚಂದ್ರಶೇಖರ್‍ನಿಂದ 1.30 ಕೋಟಿ ರೂ. ನಗದು ಹಾಗೂ ಒಂದು ಬಿಎಂಡಬ್ಲ್ಯು ಕಾರು ಮತ್ತು ಒಂದು ಮರ್ಸಿಡಿಸ್ ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸುಕೇಶ್ ಚಂದ್ರಶೇಖರ್‍ನನ್ನು ತೀವ್ರ ತನಿಖೆಗೆ ಒಳಪಡಿಸಿರುವ ಪೊಲೀಸರು, ಚುನಾವಣಾ ಆಯೋಗದ ಯಾವ ಯಾವ ಅಧಿಕಾರಿಗಳ ಜೊತೆ ಅವನ ಸಂಪರ್ಕವಿದೆ ಎಂಬ ಬಗ್ಗೆ ಪತ್ತೆ ಹಚ್ಚುವ ಪ್ರಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಶಶಿಕಲಾ ಮತ್ತು ಮಾಜಿ ಮುಖ್ಯಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ನೇತೃತ್ವದ ಎರಡೂ ಎಐಎಡಿಎಂಕೆ ಬಣಗಳೂ ಮೂಲ ಚಿಹ್ನೆ ನಮ್ಮದೇ ಎಂದು ಜಗಳಕ್ಕೆ ನಿಂತಾಗ ಚುನಾವಣಾ ಆಯೋಗವು ಪಕ್ಷದ ಚಿಹ್ನೆಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು.

ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್‍ಕೆ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಏ. 12ಕ್ಕೆ ನಿಗದಿಯಾಗಿತ್ತು. ಆದರೆ ಶಶಿಕಲ ಬಲಗೈ ಭಂಟ ಮತ್ತು ಸಚಿವ ವಿಜಯಭಾಸ್ಕರ್ ಮತದಾರರಿಗೆ ಭಾರೀ ಪ್ರಮಾಣದ ಹಣ ಹಂಚಿದ ಆರೋಪದಲ್ಲಿ ಬಂಧಿತನಾದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಆಯೋಗ ಮುಂದೂಡಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin