ಪಕ್ಷ ವಿರೋಧಿಗಳ ವಿರುದ್ಧ ಕಠಿಣ ಕ್ರಮಕ್ಕೆ ಬಿಎಸ್‍ವೈ ಪಟ್ಟು

Yadiyurappa
ನವದೆಹಲಿ,ಏ.29-ಪಕ್ಷ ವಿರೋಧಿ ಚಟುವಟಿಕೆ ತೊಡಗಿರುವ ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪನವರ ಆಟಾಟೋಪಗಳಿಗೆ ರಾಷ್ಟ್ರೀಯ ನಾಯಕರು ಬ್ರೇಕ್ ಹಾಕಿ ತಕ್ಷಣವೇ ಶಿಸ್ತು ಕ್ರಮ ಜರುಗಿಸಲೇಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.  ನವದೆಹಲಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ವರಿಷ್ಠರ ಸೂಚನೆ ಯನ್ನು ಧಿಕ್ಕರಿಸಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಈಶ್ವರಪ್ಪ ತಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಬೇಕು. ಕೇಂದ್ರ ನಾಯಕರು ಅವರ ವಿರುದ್ದ ಅಶಿಸ್ತಿನ ವರ್ತನೆಗೆ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.ರಾಷ್ಟ್ರೀಯ ನಾಯಕರ ಸಮ್ಮುಖದಲ್ಲಿ ನಡೆದ ಮಾತುಕತೆಯಂತೆ ಈಶ್ವರಪ್ಪ ರಾಯಣ್ಣ ಬ್ರಿಗೇಡ್ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದಿತ್ತು. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಕೂಡ ಇದೇ ಸೂಚನೆಯನ್ನು ಕೊಟ್ಟಿದ್ದರು. ಆದರೆ ಪುನಃ ಅದೇ ವರ್ತನೆಯನ್ನು ಈಶ್ವರಪ್ಪ ಮುಂದುವರೆಸಿರುವುದರಿಂದ ಪಕ್ಷದಲ್ಲಿ ಗೊಂದಲ ಉಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈಗಲೂ ಕಾಲ ಮಿಂಚಿಲ್ಲ. ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಮಾತುಕತೆ ಮೂಲಕ ಎಲ್ಲವನ್ನೂ ಪರಿಹರಿಸಿಕೊಳ್ಳಬಹುದು. ಆದರೆ ಗಡುವು ನೀಡುವುದು, ಗುಂಪುಗಾರಿಕೆ ನಡೆಸುವ ಪ್ರವೃತ್ತಿಗಳನ್ನು ಮುಂದುವರೆಸಿದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪದಾಧಿಕಾರಿಗಳ ಪಟ್ಟಿ ರಚನೆಯಾದ ಬಳಿಕ ಅವರ ಕೋರಿಕೆಯಂತೆ ಕೆಲವು ಜಿಲ್ಲೆಗಳ ಅಧ್ಯಕ್ಷರನ್ನು ಬದಲಾಯಿಸ ಲಾಗಿದೆ. ಆದರೂ ತಮ್ಮ ಸ್ವಾರ್ಥ ಸಾಧನೆಗಾಗಿ ಕೆಲವರನ್ನು ಎತ್ತಿಕಟ್ಟಿ ಪಕ್ಷದಲ್ಲೇ ಎಲ್ಲವೂ ಸರಿಯಿಲ್ಲ ಎಂದು ಬಿಂಬಿಸುತ್ತಿದ್ದಾರೆ. ಇದರಿಂದ ಕಾರ್ಯಕರ್ತರಿಗೂ ನೋವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸಿರುವುದರಿಂದ ಇನ್ನು ಯಾವುದೂ ಬಾಕಿ ಉಳಿದಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಸಿ ಪಕ್ಷದ ಸಂಘಟನೆಗೆ ಅಡ್ಡಿ ಮಾಡಬಾರದೆಂದು ಮನವಿ ಮಾಡಿದರು. ಅಮಿತ್ ಷಾ ಅವರ ಸೂಚನೆಯಂತೆ ನಾನು ಅನೇಕ ಬಾರಿ ಈಶ್ವರಪ್ಪನವರ ಜೊತೆ ವೇದಿಕೆಗಳನ್ನು ಹಂಚಿಕೊಂಡಿದ್ದೇನೆ. ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಬಹುದಾದ ವಿಷಯಗಳನ್ನು ಹಾದಿಬೀದಿಯಲ್ಲಿ ರಂಪ ಮಾಡಿದ್ದಾರೆ. ಇದುವೇ ಈ ಗೊಂದಲಕ್ಕೆ ಕಾರಣ ಎಂದರು.

ಸಹಿ ಸಂಗ್ರಹಿಸಿಲ್ಲ:

ವಿಧಾನಪರಿಷತ್‍ನ ಪ್ರತಿಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸುವ ಸಂಬಂಧ ಪರಿಷತ್‍ನ ಯಾವುದೇ ಸಹಿ ಸಂಗ್ರಹಣೆಯಲ್ಲಿ ತೊಡಗಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ಕೆಲವರಿಗೆ ಈಶ್ವರಪ್ಪನವರ ವರ್ತನೆ ಬೇಸರ ಉಂಟು ಮಾಡಿದೆ. ಹಾಗಾಗಿಯೇ ಪ್ರತ್ಯೇಕ ಸಭೆ ನಡೆಸುವುದಾಗಿ ಹೇಳಿದ್ದಾರೆ. ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಲಕ್ಷಣ ಈಶ್ವರಪ್ಪನವರಲ್ಲಿ ಇಲ್ಲದಿರುವುದರಿಂದ ಅಸಮಾಧಾನ ತೋಡಿಕೊಂಡಿದ್ದಾರೆ. ನಾನು ಇಂದೇ ಬೆಂಗಳೂರಿಗೆ ವಾಪಸ್ ಆಗುತ್ತೇನೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್ಈ ಶ್ವರಪ್ಪನವರಿಗೆ ಆಪ್ತರು. ಕಡೆ ಪಕ್ಷ ಅವರಾದರೂ ಭಿನ್ನಮತೀಯರು ಸಭೆ ನಡೆಸದಂತೆ ಸೂಚಿಸಬಹುದಿತ್ತು. ಅವರಿಗೆ ಸಮಸ್ಯೆ ಬಗೆಹರಿಯುವ ಬದಲು ಮುಂದುವರೆದರೆ ಇನ್ನು ಖುಷಿಯಾಗುತ್ತದೆ ಎಂದು ವ್ಯಂಗ್ಯವಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin