ಪಠಾಣ್‍ಕೋಟ್‍ ದಾಳಿಯ ಚಾರ್ಜ್ ಶೀಟ್ ಸಲ್ಲಿಕೆ : ಮಸೂದ್ ಅಜರ್ ಕೈವಾಡ ಬಯಲು

PathanKot-01

ನವದೆಹಲಿ, ಡಿ.19-ಪಠಾಣ್‍ಕೋಟ್‍ನ ಭಾರತೀಯ ವಾಯು ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 8 ಜನರನ್ನು ಹತ್ಯೆ ಮಾಡಿದ ಭೀಕರ ಆಕ್ರಮಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಇಂದು ಸಮಗ್ರ ದೋಷಾರೋಪ ಪಟ್ಟಿಯನ್ನು ಪಂಜಾಬ್‍ನ ಮೊಹಾಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ.  ದಾಳಿಯ ರೂವಾರಿ ಜೈಷ್-ಇ-ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹೆಸರು ಪ್ರಮುಖ ಆರೋಪಿಯಾಗಿ ಚಾರ್ಜ್‍ಶೀಟ್‍ನಲ್ಲಿದೆ. ಮಸೂದ್ ಸಹೋದರ ರೌಫ್ ಅಜ್ಘರ್ ಸೇರಿದಂತೆ ಇಬ್ಬರು ಇತರ ಪ್ರಮುಖ ಭಯೋತ್ಪಾದಕರ ಹೆಸರುಗಳನ್ನೂ ಸಹ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.

ಈ ಬಗ್ಗೆ ಕಳೆದ ತಿಂಗಳುಗಳಿಂದ ತೀವ್ರ ತನಿಖೆ ಕೈಗೊಮಡಿದ್ದ ಎನ್‍ಐಎ ಇಂದು ಮೊಹಾಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಉಗ್ರರ ನಿಗ್ರಹ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಜೆಇಎಂ ನಡೆಸುತ್ತಿರುವ ಕುತಂತ್ರ ಮತ್ತು ಕುಮ್ಕಕ್ಕುಗಳ ಬಗ್ಗೆ ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.  ಹೊಸ ವರ್ಷದ ಆರಂಭದ ಎರಡನೇ ದಿನವಾದ ಜನವರಿ 2 ರಂದು ಜೈಷ್ ಉಗ್ರರು ಪಂಜಾಬ್‍ನ ಗುರುದಾಸ್‍ಪುರದಲ್ಲಿರುವ ಪಠಾಣ್‍ಕೋಟ್‍ನ ಐಎಎಫ್ ವಾಯುನೆಲೆ ಮೇಲೆ ದಾಳಿ ನಡೆಸಿ ಎಂಟು ಜನ ಯೋಧರನ್ನು ಹತ್ಯೆ ಮಾಡಿದ್ದರು.  ಈ ದಾಳಿ ವೇಳೆ ನಡೆದ ಸುದೀರ್ಘ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದರು.

ಅಜರ್ ಆತನ ಸಹೋದರ ಮತ್ತು ಭಯೋತ್ಪಾದಕರ ವಿರುದ್ಧ ಸಮಗ್ರ ತನಿಖೆ ನಡೆಸಿ ಚಾರ್ಜ್‍ಶೀಟ್ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯ ಎನ್‍ಐಎಗೆ ಸೂಚನೆ ನೀಡಿತ್ತು. ಪಠಾಣ್‍ಕೋಟ್ ದಾಳಿಗೆ ಪರೋಕ್ಷ ಕುಮ್ಮಕ್ಕು ನೀಡಿದ ಪಾಕಿಸ್ತಾನ ಭಾರತಕ್ಕೆ ತನ್ನ ಸಿಬ್ಬಂದಿಯನ್ನು ರವಾನಿಸಿ ಜಂಟಿ ತನಿಖೆಗೆ ಸಹಕರಿಸಿದ್ದು, ವಿವಾದಕ್ಕೂ ಎಡೆಮಾಡಿಕೊಟ್ಟಿತ್ತು.
ನಂತರ ಹಿಂತಿರುಗಿದ್ದ ಪಾಕಿಸ್ತಾನ ಭಾರತವು ತನಗೆ ತನಿಖೆಯಲ್ಲಿ ಸಹಕಾರ ನೀಡಿಲ್ಲ, ಸಾಕ್ಷ್ಯಾಧಾರ ಪರಿಶೀಲಿಸಲು ಅವಕಾಶ ನೀಡಿಲ್ಲ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಮಗ್ರ ತನಿಖೆ ಕೈಗೊಂಡ ಎನ್‍ಐಎ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿರುವುದರಿಂದ ಜೈಷ್ ಭಯೋತ್ಪಾದಕರಿಗೆ ಕಾನೂನು ಕುಣಿಕೆ ಕಂಟಕವಾಗಿ ಪರಿಣಮಿಸಿದೆ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin