ಪತ್ರಿಕಾಗೋಷ್ಠಿಯಲ್ಲಿ ಸಿಟ್ಟಿಗೆದ್ದ ದೇವೇಗೌಡರು

Devegowda

ಬೆಂಗಳೂರು,ನ.1- ನನಗೂ ಒಕ್ಕಲಿಗರ ಸಂಘಕ್ಕೂ ಏನ್ರೀ ಸಂಬಂಧ? ಸಚಿವರು ಸರಿಮಾಡ್ತಿನಿ ಅಂದಿದ್ದರಲ್ಲ… ಮಾಡ್ಲಿ ಬಿಡಿ ಎಂದು ಡಿ.ಕೆ. ಶಿವಕುಮಾರ್ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ವ್ಯಂಗ್ಯವಾಡಿದರು. ಪತ್ರಿಕಾಗೋಷ್ಠಿಯಲ್ಲಿಂದು ಸುದ್ದಿಗಾರರು ಒಕ್ಕಲಿಗರ ಸಂಘದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಕೇಳಿದ ಪ್ರಶ್ನೆಗೆ ಸಿಟ್ಟಾದ ದೇವೇಗೌಡರು, ನನ್ನ ಕೆಲಸ ರಾಜಕಾರಣ ಅಷ್ಟೇ ಸಂಘ ನೋಡಿಕೊಳ್ಳುವುದಲ್ಲ. ಸಂಘಕ್ಕೂ ನನಗೂ ಏನು ಸಂಬಂಧ ಎಂದು ಗರಂ ಆದರು. ಅಧಿಕಾರದಲ್ಲಿರುವ ಸಚಿವರು ರಾಜ್ಯ ಒಕ್ಕಲಿಗರ ಸಂಘದ ನ್ಯೂನ್ಯತೆಗಳನ್ನು ಸರಿಪಡಿಸಿದರೆ ಸಂತೋಷ. ನಾವು ಒಕ್ಕಲಿಗ ಸಂಘ ಇಟ್ಟುಕೊಂಡು ಏನು ಮಾಡಲಿ? ನನ್ನಲ್ಲಿ ಅಧಿಕಾರವಿಲ್ಲ ಎಂದು ತಿಳಿಸಿದರು.

ಬಿಜೆಪಿ ಪಕ್ಷ ಮುಖಂಡರನ್ನು ಸೆಳೆಯುವಾಗ ಮೆರೆವಣಿಗೆ ಮಾಡಿ ಕರೆದುಕೊಂಡು ಹೋಗುತ್ತಾರೆ. ಸೇರಿದ ಮೇಲೆ ಅವರೇನಾದರೂ ಎನ್ನುವುದಕ್ಕೆ ಬಂಗಾರಪ್ಪ, ರಾಜಶೇಖರ ಮೂರ್ತಿ ಸಾಕ್ಷಿ ಎಂದು ಶ್ರೀನಿವಾಸ್ ಪ್ರಸಾದ್ ಅವರ ಬಿಜೆಪಿ ಸೇರ್ಪಡೆ ಕುರಿತಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಪ್ರಸಾದ್ ಅವರು ಪಕ್ಷೇತರರಾಗಿ ಕಣಕ್ಕಿಳಿಯುವ ನಿರ್ಧಾರ ಮಾಡಿದರೆ ನಾವು ಅವರ ನಡೆಯನ್ನು ಬೆಂಬಲಿಸುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಕನ್ನಡ ನಾಡನ್ನು ಒಡೆಯುವ ಒಡಕು ಶಬ್ದವನ್ನು ಯಾರೂ ಆಡಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಹೇಳಿದರು.

ಎಲ್ಲರೂ ಒಟ್ಟಾಗಿ ಕನ್ನಡ ನಾಡು-ನುಡಿಗಾಗಿ ದುಡಿಯಬೇಕಿದೆ. ಸಣ್ಣಪುಟ್ಟ ವಿವಾದಗಳಿದ್ದರೂ ಬಗೆಹರಿಸಿಕೊಂಡು ಕನ್ನಡಕ್ಕಾಗಿ ಒಟ್ಟಾಗಿ ಶ್ರಮಿಸಬೇಕು ಎಂದು ಹೇಳಿದರು.
ನಾಯಕರಲ್ಲಿ ಬೇಸರವಿದ್ದ ಮಾತ್ರಕ್ಕೆ ರಾಜ್ಯವನ್ನು ವಿಭಜಿಸುವ ಮಾತನ್ನು ಆಡಬಾರದು. ಮುಂಬೈ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಎಂಬ ಒಡಕು ಶಬ್ದ ಯಾರೊಬ್ಬರ ಬಾಯಲ್ಲೂ ಎಂದಿಗೂ ಬರಬಾರದು. ಈ ಶಬ್ದ ಬಳಸುವುದು ಯೋಗ್ಯವಲ್ಲ ಎಂದ ಅವರು ಕರ್ನಾಟಕ ಎಂದು ನಾಮಕರಣ ಮಾಡಿದ ಸಂದರ್ಭದಿಂದಲೂ ರಾಜಕೀಯದಲ್ಲಿ ಇದ್ದೇನೆ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ ಎಂದರು.

► Follow us on –  Facebook / Twitter  / Google+

Sri Raghav

Admin