ಪರಪ್ಪನ ಅಗ್ರಹಾರದ ಬೋನು ಸೇರಲಿರುವ ‘ಸಿಂಹದ ಮರಿ’ ಶಶಿಕಲಾ
ಬೆಂಗಳೂರು,ಫೆ.15-ತಮಿಳುನಾಡು ಮುಖ್ಯಮಂತ್ರಿ ದಿ.ಜಯಲಲಿತಾ ಅವರು ಸಿಂಹಿಣಿ. ನಾನು ಸಿಂಹದ ಮರಿ. ನೀವ್ಯಾರು ಹೆದರಬೇಡಿ ಎಂದು ಖಡಕ್ಕಾಗಿ ಹೇಳಿದ್ದ ಎಐಎಡಿಎಂಕೆ ನಾಯಕಿಯಾದ ಶಶಿಕಲಾ ಎಂಬ ಸಿಂಹದ ಮರಿ ಈಗ ಪರಪ್ಪನ ಅಗ್ರಹಾರದ ಬೋನಿಗೆ ಸಿಲುಕಿದೆ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಈ ಹಿಂದೆಯೇ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದ ವಿ. ಶಶಿಕಲಾ, ಇಳವರಸಿ, ಸುಧಾಕರನ್ ಅವರ ಮೇಲಿನ ಆರೋಪ ಹೈಕೋರ್ಟ್ನಲ್ಲಿ ವಜಾಗೊಂಡ ಹಿನ್ನೆಲೆಯಲ್ಲಿ ಹೊರಬಂದಿದ್ದರು. ನಿನ್ನೆ ಸುಪ್ರೀಂಕೋರ್ಟ್ ಅವರನ್ನು ಅಪರಾಧಿಗಳೆಂದು ಪರಿಗಣಿಸಿ ಅಧೀನ ನ್ಯಾಯಾಲಯದ ಶಿಕ್ಷೆಯನ್ನು ಎತ್ತಿಹಿಡಿದ ಹಿನ್ನೆಲೆಯಲ್ಲಿ ಈಗ ಪರಪ್ಪನ ಅಗ್ರಹಾರ ಜೈಲಿಗೆ ರೀ ಎಂಟ್ರಿ ಪಡೆಯಬೇಕಾಗಿದೆ.
ತಮಿಳುನಾಡಿನಲ್ಲಿ ಛಾಯಾಮುಖ್ಯಮಂತ್ರಿಯಂತೆ ಕೆಲಸ ನಿರ್ವಹಿಸುತ್ತಿದ್ದ ವಿ.ಶಶಿಕಲಾ ಅವರು ಸುಪ್ರೀಂಕೋರ್ಟ್ ತೀರ್ಪಿನಿಂದ ತಣ್ಣಗಾಗಿದ್ದು , ಈಗ ಪರಪ್ಪನ ಅಗ್ರಹಾರದ ಜೈಲಿನತ್ತ ಹೆಜ್ಜೆ ಹಾಕಿದ್ದಾರೆ. ಕೊನೆ ಪ್ರಯತ್ನ ಎಂಬಂತೆ ನ್ಯಾಯಾಲಯ ಮುಂದೆ ಶರಣಾಗಲು ಕಾಲಾವಕಾಶ ನೀಡಬೇಕೆಂದು ಮಾಡಿದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಇಂದೇ ಶಶಿಕಲಾ ಮತ್ತಿತರರು ಬೆಂಗಳೂರಿನ ಕೇಂದ್ರ ಕಾರಾಗೃಹ ಸೇರಬೇಕಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >