ಪರಪ್ಪನ ಅಗ್ರಹಾರ ಜೈಲಿಗೆ ಹಿಂದಿರುಗಿದ ಶಶಿಕಲಾ

Sasikla-Jail

ಬೆಂಗಳೂರು, ಅ.12- ತಮ್ಮ ಪತಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಐದು ದಿನಗಳ ಪೆರೋಲ್ ಮೇಲೆ ಚೆನ್ನೈಗೆ ತೆರಳಿದ್ದ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ.ಶಶಿಕಲಾ ಪೆರೋಲ್ ಮುಗಿದ ಹಿನ್ನೆಲೆಯಲ್ಲಿ ಇಂದು ಪರಪ್ಪನ ಅಗ್ರಹಾರ ಜೈಲಿಗೆ ಹಿಂದಿರುಗಿದರು. ತಮ್ಮ ಪತಿ ನಟರಾಜನ್ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಹಾಗೂ ಯಕೃತ್ ಶಸ್ತ್ರ ಚಿಕಿತ್ಸೆ ಆದ ಹಿನ್ನೆಲೆಯಲ್ಲಿ ಅವರನ್ನು ನೋಡಲು ಐದು ದಿನಗಳ ಪೆರೋಲ್ ಪಡೆದು ಚೆನ್ನೈಗೆ ತೆರಳಿದ್ದ ವಿ.ಕೆ.ಶಶಿಕಲಾ ಅವರನ್ನು ಇಂದು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆತರಲಾಯಿತು.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಒಳಗಾಗಿರುವ ವಿ.ಕೆ.ಶಶಿಕಲಾ, ಇಳವರಸಿ, ಸುಧಾಕರನ್ ಅವರು ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪೆರೋಲ್ ಮೇಲೆ ಚೆನ್ನೈಗೆ ತೆರಳಲು ಶಶಿಕಲಾ ಅವರು 15 ದಿನಗಳ ಕಾಲಾವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನಂತರ ಎರಡನೆ ಬಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಲಾಗಿದ್ದು, ಅವರು ಚೆನ್ನೈಗೆ ತೆರಳಿ ತಮ್ಮ ಪತಿಯನ್ನು ಭೇಟಿ ಮಾಡಿ ಹಿಂದಿರುಗಿದ್ದಾರೆ. ಚೆನ್ನೈನಲ್ಲಿ ಯಾವುದೇ ರಾಜಕೀಯ ಸಭೆಗಳು ನಡೆದಿಲ್ಲ. ಎಐಎಡಿಎಂಕೆಯ ಯಾವುದೇ ರಾಜಕೀಯ ಮುಖಂಡರನ್ನು ಭೇಟಿ ಮಾಡಿಲ್ಲ ಮತ್ತು ರಾಜಕಾರಣದ ಬಗ್ಗೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ ಎಂದು ತಿಳಿದುಬಂದಿದೆ.

ಜೈಲಿನಲ್ಲಿ ಶಶಿಕಲಾ ಅವರಿಗೆ ರಾಜಾಥಿತ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು ಹಾಗೂ ಈ ವಿಷಯ ಸಾಕಷ್ಟು ಚರ್ಚೆಗೂ ಕೂಡ ಗ್ರಾಸವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಅಧಿಕಾರಿಗಳನ್ನು ಕೂಡ ವರ್ಗ ಮಾಡಲಾಗಿತ್ತು.

Sri Raghav

Admin