ಪರಪ್ಪನ ಅಗ್ರಹಾರ ಜೈಲು ಮತ್ತೆ ತಮಿಳುನಾಡು ಶಕ್ತಿಕೇಂದ್ರವಾಗಲಿದೆಯೇ…?

Sasikala--01

ಬೆಂಗಳೂರು, ಫೆ.16-ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೊಂದು ತಮಿಳುನಾಡು ಸರ್ಕಾರದ ಕೇಂದ್ರ ಕಾರ್ಯಸ್ಥಾನವಾಗುವುದೇ…? ಅಂತಹ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ, ಮುಖ್ಯಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದ ವಿ.ಕೆ.ಶಶಿಕಲಾ ನಟರಾಜನ್ ಅವರು ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿದ್ದಾರೆ.
ಅವರ ಪರಮಾಪ್ತನಾದ ಎಡಪ್ಪಾಡಿ ಪಳನಿಸ್ವಾಮಿ ಈಗ ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿ ಬಂದಿದ್ದಾರೆ. ಅವರು ಸ್ವಾಮಿ ನಿಷ್ಠೆ ತೋರಿದರೆ ಶಶಿಕಲಾ ಅವರು ಜೈಲಿನಿಂದಲೇ ರಿಮೋಟ್ ಕಂಟ್ರೋಲ್ ಪ್ರಹರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಎಐಎಡಿಎಂಕೆಯ ಕೇಂದ್ರ ಕಾರ್ಯಸ್ಥಾನವಾಗಲಿದೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರವಾಗಿದೆ.

ಈ ಹಿಂದೆ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಜೈಲು ಪಾಲಾಗಿದ್ದಾಗ 21 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆಗ ಜಯಲಲಿತಾ ಅವರ ಪರಮಾಪ್ತರಾಗಿದ್ದ ಪನ್ನೀರ್ ಸೆಲ್ವಂ ಮುಖ್ಯಮಂತ್ರಿಯಾಗಿದ್ದರು.  ಜಯಲಲಿತಾ ಅವರ ಮೇಲಿನ ಆರೋಪ ಹೈಕೋರ್ಟ್‍ನಲ್ಲಿ ವಜಾಗೊಂಡ ಮೇಲೆ ತಮ್ಮ ಸ್ಥಾನವನ್ನು ತೆರವು ಮಾಡಿಕೊಟ್ಟಿದ್ದರು. ಅಷ್ಟೇ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದರು. ಒಂದು ದಿನವೂ ಕೂಡ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿರಲಿಲ್ಲ. ಪಕ್ಕದಲ್ಲಿ ಒಂದು ಕುರ್ಚಿ ಹಾಕಿಕೊಂಡು ಸೆಲ್ವಂ ಕುಳಿತುಕೊಳ್ಳುತ್ತಿದ್ದರು. ಎಲ್ಲವೂ ಜೈಲಿನ ಮೂಲಕವೇ ಆಡಳಿತ ನಡೆಯುತ್ತಿತ್ತು. ಕೇಂದ್ರ ಕಾರಾಗೃಹ ತಮಿಳುನಾಡು ಸರ್ಕಾರದ ಕೇಂದ್ರ ಸ್ಥಾನವಾಗಿತ್ತು. ಈಗಲೂ ಕೂಡ ಅದೇ ಪರಿಸ್ಥಿತಿ ಎದುರಾಗಬಹುದೇನೋ….

ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕನಾಗಿ ಎಡಪ್ಪಾಡಿ ಪಳನಿಸ್ವಾಮಿ ಆಯ್ಕೆಯಾಗಿದ್ದಾರೆ. ರಾಜ್ಯಪಾಲರೇನಾದರೂ ಅವರಿಗೆ ಸರ್ಕಾರ ರಚನೆಗೆ ಅವಕಾಶ ಕೊಟ್ಟು ಬಹುಮತ ಸಾಬೀತಾದರೆ ಅವರು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಜಯಲಲಿತಾಗೆ ಪ್ರದರ್ಶಿಸಿದ ಸ್ವಾಮಿ ನಿಷ್ಠೆಯನ್ನು ಪಳನಿಸ್ವಾಮಿ ಶಶಿಕಲಾ ಅವರಿಗೆ ಪ್ರದರ್ಶಿಸಿದರೆ ಜೈಲಿನಿಂದಲೇ ಆಡಳಿತ ನಡೆಯುವ ಸಾಧ್ಯತೆ ಇದೆ.  ಆದರೆ ಜಯಲಲಿತಾ ಅವರು ಮೂರು ಬಾರಿ ಮುಖ್ಯಮಂತ್ರಿಯಾಗಿದ್ದರು. ತಮಿಳುನಾಡಿನ ಜನರ ಮನದಲ್ಲಿ ಅಮ್ಮಾ ಆಗಿದ್ದರು. ಜಯಲಲಿತಾಗೋಸ್ಕರ ಪ್ರಾಣ ಕೊಡುವ ಜನ ತಮಿಳುನಾಡಿನಲ್ಲಿದ್ದರು. ಅಮ್ಮಾಗೋಸ್ಕರ ಏನನ್ನಾದರೂ ತ್ಯಾಗ ಮಾಡುವ ಮಂದಿ ಅಲ್ಲಿದ್ದರು. ಇಡೀ ಎಐಎಡಿಎಂಕೆ ಶಾಸಕರು, 1.25 ಕೋಟಿ ಕಾರ್ಯಕರ್ತರು ಅಮ್ಮಾ ಮಾತಿಗೆ ಬೆಲೆ ಕೊಡುತ್ತಿದ್ದರು. ಅಂತಹ ದೊಡ್ಡ ಪಕ್ಷದಲ್ಲಿ ಅಮ್ಮಾನಂತಹ ವರ್ಚಸ್ಸನ್ನು ಚಿನ್ನಮ್ಮ ಸದ್ಯ ಹೊಂದಿಲ್ಲ. ಭಾವನಾತ್ಮಕ ನೆಲೆಗಟ್ಟಿನ ರಾಜಕೀಯ ಮೇಲಾಟ ನಡೆಯುವ ತಮಿಳುನಾಡಿನಲ್ಲಿ ಈಗ ಚಿನ್ನಮ್ಮನ ಆಟ ನಡೆಯುವುದೇ, ಪಳನಿಸ್ವಾಮಿ ಸ್ವಾಮಿ ನಿಷ್ಠೆ ಪ್ರದರ್ಶಿಸುವರೇ? ಅಮ್ಮನ ಸಮಾಧಿ ಮುಂದೆ ಶಶಿಕಲಾ ಮಾಡಿದ ಪ್ರತಿಜ್ಞೆಗೆ ಪ್ರತಿಫಲ ಸಿಗುವುದೇ ಅಥವಾ ಜೈಲು ಪಾಲಾದ ಶಶಿಕಲಾ ಅವರನ್ನು ಅಲ್ಲಿಯೇ ಹಣಿಯುವ ಕೆಲಸವನ್ನು ಮಾಡುವರೇ ಕಾದು ನೋಡಬೇಕು.

ತಮಿಳುನಾಡಿನಲ್ಲಿ ಭಾಷೆ, ಅನ್ನ, ಅಲ್ಲಿನ ಸಂಸ್ಕøತಿಗೆ ಜನ ಹೆಚ್ಚು ಒತ್ತು ಕೊಡುತ್ತಾರೆ. ಯಾವುದೇ ರಾಷ್ಟ್ರೀಯ ಪಕ್ಷಗಳಿಗೆ ಮನ್ನಣೆ ನೀಡುವುದಿಲ್ಲ. ಕಾಮರಾಜ್ ನೇತೃತ್ವದ ಕಾಂಗ್ರೆಸ್ ನಂತರ ಯಾವುದೇ ಪಕ್ಷಗಳು ಅಲ್ಲಿ ತಲೆ ಎತ್ತಲು ಸಾಧ್ಯವಾಗಿಲ್ಲ. ಅಂತಹ ಹಿಡಿತ ಪ್ರಾದೇಶಿಕ ಪಕ್ಷಗಳಿಗೆ ಇತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಎಐಎಡಿಎಂಕೆಯ ಪರಮೋಚ್ಛ ನಾಯಕಿ ಜಯಲಲಿತಾ ಅವರ ನಿಧನಾನಂತರ ಅಷ್ಟು ಪ್ರಬಲವಾದ ನಾಯಕತ್ವ ಇನ್ನೂ ಉದಯವಾಗಿಲ್ಲ. ಕೇವಲ ಶಾಸಕಾಂಗ ಪಕ್ಷದ ನಾಯಕರಾಗಿ ಪಳನಿ ಸ್ವಾಮಿ ಆಯ್ಕೆಯಾಗಿದ್ದಾರೆ. ಇವರಿಗೆ ಸಾಕಷ್ಟು ರಾಜಕೀಯ ಹಿನ್ನೆಲೆ ಇರಬಹುದಾದರೂ ತಮಿಳಿಗರ ಮನದಲ್ಲಿ ನೆಲೆಸಬಹುದಾದ ವ್ಯಕ್ತಿತ್ವ ಅಧಿಕಾರಕ್ಕೆ ಬಂದ ಮೇಲಷ್ಟೆ ರೂಪುಗೊಳ್ಳಬೇಕಿದೆ.   ಇನ್ನು ಏನೇನಾಗಲಿದೆಯೋ ತಮಿಳುನಾಡಿನ ವಿಪಕ್ಷ, ರಾಷ್ಟ್ರೀಯ ಪಕ್ಷಗಳು ಯಾವ ದಾಳಗಳನ್ನು ಉರುಳಿಸಲಿವೆಯೋ ಕಾದುನೋಡಬೇಕು….

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin