ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಜಾತಿ ಲೆಕ್ಕಚಾರದ ವೇದಿಕೆ ..!

Parivartana-Yatre--01

ಬೆಂಗಳೂರು, ಫೆ.3-ನಗರದ ಅರಮನೆ ಮೈದಾನದಲ್ಲಿ ನಾಳೆ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ಅಂಗವಾಗಿ ನಡೆಯಲಿರುವ ಬೃಹತ್ ಕಾರ್ಯಕ್ರಮಕ್ಕಾಗಿ ನಿರ್ಮಿಸಿರುವ ವೇದಿಕೆಯೂ ಸಹ ಜಾತಿ ಲೆಕ್ಕಚಾರದಂತೆಯೇ ಸಿದ್ದಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿರುವ ಈ ಮಹತ್ವದ ಸಮಾರಂಭದಲ್ಲಿ ಇವರೊಂದಿಗೆ ಮುಖ್ಯ ವೇದಿಕೆಯಲ್ಲಿ ಒಟ್ಟು 27 ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆದರೆ ಇದರಲ್ಲಿ ಜಾತಿ ಲೆಕ್ಕಾಚಾರ ಮಾಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯ ಉಸ್ತುವಾರಿ ಮುರುಳೀಧರ್ ರಾವ್, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ನಿರ್ಮಲ ಸೀತಾರಾಮನ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ , ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಪ್ರಹ್ಲಾದ್ ಜೋಷಿ ಸೇರಿದಂತೆ 27 ಮಂದಿ ವೇದಿಕೆಯಲ್ಲಿ ಕೂರಲು ಅವಕಾಶ ನೀಡಲಾಗಿದೆ.

ಇಲ್ಲಿಯೂ ಜಾತಿ ಲೆಕ್ಕಾಚಾರ ಹಾಕಿದ್ದು , ಲಿಂಗಾಯಿತ ಸಮುದಾಯದಿಂದ ಯಡಿಯೂರಪ್ಪ , ಜಗದೀಶ್ ಶೆಟ್ಟರ್, ಜಿ.ಎಂ.ಸಿದ್ದೇಶ್ವರ್, ಬ್ರಾಹ್ಮಣ ಕೋಟಾದಲ್ಲಿ ಅನಂತಕುಮಾರ್ ಹೆಗಡೆ, ಒಕ್ಕಲಿಗ ಸಮುದಾಯದಿಂದ ಆರ್.ಅಶೋಕ್, ಶೋಭ ಕರಂದ್ಲಾಜೆ, ದಲಿತ ಸಮುದಾಯದಿಂದ ರಮೇಶ್ ಜಿಗಜಿಣಗಿ, ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಹಿಂದುಳಿದ ವರ್ಗದ ಸಮುದಾಯದಿಂದ ಈಶ್ವರಪ್ಪ , ಪರಿಶಿಷ್ಟ ವರ್ಗದಿಂದ ಶ್ರೀರಾಮುಲು ವೇದಿಕೆ ಏರಲಿದ್ದಾರೆ.
ಇನ್ನು ಮುಖ್ಯ ವೇದಿಕೆಯಲ್ಲಿ ಯಾವುದೇ ಮೋರ್ಚಾದ ಅಧ್ಯಕ್ಷರಿಗೆ ಅವಕಾಶ ಕಲ್ಪಿಸಿಲ್ಲ. ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಸೇರಿದಂತೆ ಮತ್ತಿತರರು ಮುಖ್ಯ ವೇದಿಕೆಯ ಪಕ್ಕದಲ್ಲಿ ಕೂರಬೇಕು.

ಇನ್ನು ಸಮಾವೇಶ ನಡೆಯುವ ಅರಮನೆ ಮೈದಾನದಲ್ಲಿ ಮುಖ್ಯ ವೇದಿಕೆ ಎಲ್ಲರನ್ನು ಆಕರ್ಷಿಸುವಂತೆ ಮಾಡಲಾಗಿದೆ. 20 ಅಡಿ ಎತ್ತರ 80 ಅಡಿ ಅಗಲ, 40 ಅಡಿ ಉದ್ದದ ಬೃಹತ್ ವೇದಿಕೆಯನ್ನು ಸಿದ್ದಪಡಿಸಲಾಗಿದೆ. ಪ್ರಧಾನಿಯವರ ಭಾಷಣವನ್ನು ಎಲ್ಲೆಡೆ ವೀಕ್ಷಿಸಲು ಅರಮನೆ ಮೈದಾನದಲ್ಲಿ 20 ಬೃಹದಾಕಾರದ ಎಲ್‍ಸಿಡಿ ಪರದೆಗಳನ್ನು ಅಳವಡಿಸಲಾಗಿದೆ.

#BJP #ParivartanaYatre #Rally  #Mod1

 

Sri Raghav

Admin