ಪರೇಶ್ ಮೇಸ್ತಾ ಕೊಲೆ ಪ್ರಕರಣವನ್ನು ಎನ್‍ಐಎ ಒಪ್ಪಿಸಬೇಕು : ಶೋಭಾ ಕರಂದ್ಲಾಜೆ

Spread the love

shobhakarandlaje

ಬೆಂಗಳೂರು, ಡಿ.13-ದಕ್ಷಿಣ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಕೊಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‍ಐಎ) ವಹಿಸುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ರಾಜ್‍ನಾಥ್‍ಸಿಂಗ್ ಅವರನ್ನು ಭೇಟಿ ಮಾಡುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ರಾಜ್ಯಸರ್ಕಾರ ಈ ಪ್ರಕರಣವನ್ನು ಮುಚ್ಚಿ ಹಾಕಲು ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಖುದ್ದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರೇ ಆರೋಪಿಗಳ ಪರ ನಿಂತಿರುವುದರಿಂದ ಸತ್ಯಾಂಶ ಹೊರಬರಲು ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನನ ಪುನರ್ಜನ್ಮದಿಂದ ಹುಟ್ಟಿ ಬಂದವರಂತೆ ಆಡುತ್ತಾರೆ. ಅವರಿಗೆ ಹಿಂದೂಗಳ ರಕ್ಷಣೆ ಬೇಕಿಲ್ಲ. ಹಿಂದೂಗಳ ಮೇಲೆ ಹಲ್ಲೆ ನಡೆದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ವೋಟ್‍ಬ್ಯಾಂಕ್‍ಗಾಗಿ ಮುಸ್ಲೀಮರನ್ನು ಓಲೈಸುತ್ತಿದ್ದಾರೆ ಎಂದು ಆರೋಪಿಸಿದರು. ಪರೇಶ್ ಮೇಸ್ತಾನನ್ನು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಐಎಸ್ ಸಂಘಟನೆಗಳೊಂದಿಗೆ ಪಿಎಫ್‍ಐನ ಪದಾಧಿಕಾರಿಗಳು ಸಂಪರ್ಕ ಹೊಂದಿರುವ ಶಂಕೆ ಇದೆ. ಆದ್ದರಿಂದ ಪಿಎಫ್‍ಐ ಸಂಘಟನೆ ನಿಷೇಧಿಸಬೇಕು. ಅದರ ಪದಾಧಿಕಾರಿಗಳನ್ನು ಬಂಧಿಸಬೇಕು ಹಾಗೂ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದರು.

ಪರೇಶ್ ಮರಣೋತ್ತರ ವರದಿ ನೀಡಿದ ವೈದ್ಯರು ನಾಪತ್ತೆಯಾಗಿದ್ದಾರೆ. ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರ ಮೊಬೈಲ್‍ಗೆ ಕರೆ ಮಾಡಿದರೂ ಸಿಗುತ್ತಿಲ್ಲ. ಈ ವೈದ್ಯರಿಗೆ ಪ್ರಶ್ನಾವಳಿಗಳನ್ನು ಯಾರು ತಯಾರು ಮಾಡಿಕೊಟ್ಟರು, ಪೊಲೀಸರೋ, ಸರ್ಕಾರವೋ ಎಂದು ಪ್ರಶ್ನಿಸಿದರು. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‍ಎಸ್‍ಎಲ್) ವರದಿ ಹಾಗೂ ಪೊೀಸ್ಟ್ ಮಾರ್ಟಂ ವರದಿಗೂ ತುಂಬಾ ವ್ಯತ್ಯಾಸವಿದೆ. ಈ ರೀತಿ ವರದಿ ನೀಡಿದ ಮಣಿಪಾಲ್ ವೈದ್ಯರು ನಾಪತ್ತೆಯಾಗಿದ್ದು, ಈ ಎರಡೂ ವರದಿಗಳ ಸತ್ಯಾಸತ್ಯತೆಯನ್ನು ಜನತೆಯ ಮುಂದಿಡುವಂತೆ ಆಗ್ರಹಿಸಿದರು.

ಸರ್ಕಾರ ಈ ಪ್ರಕರಣವನ್ನು ಒಂದು ಸಣ್ಣ ಘಟನೆ, ಸಹಜ ಸಾವು ಎಂದು ಬಿಂಬಿಸುತ್ತಿದೆ. ಐಸಿಎಸ್ ಭಯೋತ್ಪಾದಕರ ರೀತಿ ಈ ಕೊಲೆ ಮಾಡಲಾಗಿದೆ. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Facebook Comments

Sri Raghav

Admin