ಪಹಣಿ ಪಡೆಯಲು ರೈತರ ಪಡಿಪಾಟಲು, ತಾಲೂಕು ಕಚೇರಿಗಳಲ್ಲಿ ಉದ್ದುದ್ದ ಸಾಲು

pahani
ರಾಜ್ಯದಲ್ಲಿ ಹಿಂಗಾರು-ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಜಿಲ್ಲೆಗಳಲ್ಲಿ ತೀವ್ರ ತರದ ಬರ ಪರಿಸ್ಥಿತಿ ಎದುರಾಗಿದೆ.  ಬರಗಾಲ ಎದುರಾಗಿರುವುದರಿಂದ ಬೆಳೆ ಹಾನಿ ಕುರಿತು ಸರ್ಕಾರ ರೈತರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿಯೊಂದಿಗೆ ರೈತರು ಪಹಣಿ ಮತ್ತಿತರ ದಾಖಲೆಗಳನ್ನು ಕೊಡಬೇಕಾಗಿದೆ. ಹಾಗಾಗಿ ಪ್ರತಿನಿತ್ಯ ತಾಲೂಕು ಕಚೇರಿಗಳಿಗೆ ಪಹಣಿ ಮತ್ತಿತರ ದಾಖಲೆ ಪಡೆಯಲು ರೈತರು ಚಪ್ಪಲಿ ಸವೆಸುವಂತಾಗಿದೆ.ತಿಪಟೂರು ತಾಲೂಕು ಕಚೇರಿಯಲ್ಲಿ ಬೆಳ್ಳಂಬೆಳಗ್ಗೆ ಬೆಳೆ ಹಾನಿ ಅರ್ಜಿ ಸಲ್ಲಿಸಲು ಪಹಣಿ ಪಡೆಯುವುದಕ್ಕಾಗಿ ರೈತರು ಕೆಲಸ ಕಾರ್ಯಗಳನ್ನು ಬಿಟ್ಟು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ಇದು ತಿಪಟೂರಿನಲ್ಲಷ್ಟೇ ಅಲ್ಲ, ಬಹುತೇಕ ತಾಲೂಕು ಕಚೇರಿಗಳಲ್ಲಿ ಇದೇ ಕಥೆಯಾಗಿದೆ.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕಳೆದ ಒಂದು ವಾರದಿಂದ ಪಹಣಿಗಾಗಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಹೆಚ್ಚಿನ ಜನ ಸಂದಣಿ ಉಂಟಾಗಿ ಬೆಳಿಗ್ಗೆ ಕಚೇರಿ ತೆರೆಯುವುದಕ್ಕೆ ಮೊದಲೇ ಉದ್ದನೆಯ ಸಾಲು ಉಂಟಾಗಿ ಗೊಂದಲಕ್ಕೆ ಕಾರಣವಾಗುತ್ತಿದೆ. ತಾಲ್ಲೂಕಿನಾದ್ಯಂತ ಬರಗಾಲ ಬಂದಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ರೈತರಿಗಾಗಿ ಬೆಳೆಹಾನಿಗೆ ಅರ್ಜಿ ಆಹ್ವಾನಿಸಿರುವ ಹಿನ್ನೆಲೆ ಮತ್ತು ಇತರೆ ಕಾರಣಕ್ಕೆ ಪಹಣಿ ಅವಶ್ಯವಿರುವುದರಿಂದ ಪಹಣಿಗಾಗಿ ರೈತರು ಬೆಳಗಿನಿಂದಲೇ ಸಾಲುಗಟ್ಟಿ ನಿಲ್ಲುತ್ತಿದ್ದ್ದಾರೆ. ಆದರೆ ಇಲ್ಲಿ ವಿಷಾದನಿಯ ಸಂಗತಿಯೆಂದರೆ ಹೋಬಳಿ ಕೇಂದ್ರಗಳಲ್ಲಿ ನಾಡ ಕಚೇರಿಗಳಲ್ಲಿ ಪಹಣಿ ವಿತರಣೆಯಾಗದಿರುವುದರಿಂದ ತಾಲೂಕು ಕಚೇರಿಗಳಲ್ಲಿ ರೈತರು ಎಲ್ಲಾ ಕೆಲಸ ಬಿಟ್ಟು ಕ್ಯೂನಲ್ಲಿ ತಮ್ಮ ಸರದಿಗಾಗಿ ಕಾಯಬೇಕಾಗಿದೆ.

ಹೋಬಳಿಯ ನಾಡ ಕಚೇರಿಗಳಲ್ಲಿ ಕಳೆದ ಒಂದು ವಾರದಿಂದ ಪಹಣಿ ವಿತರಣೆಯಲ್ಲಿ ತೊಂದರೆ ಉಂಟಾಗಿ ಪಹಣಿ ವಿತರಿಸುತ್ತಿಲ್ಲ. ಆದ ಕಾರಣ ಎಲ್ಲಾ ಹೋಬಳಿಯ ರೈತರು ತಿಪಟೂರು ತಾಲ್ಲೂಕು ಕಚೇರಿಗೆ ಆಗಮಿಸುತ್ತಿರುವುದರಿಂದ ನೂಕುನುಗ್ಗಲಾಗುತ್ತಿದೆ. ಇದನ್ನೆಲ್ಲ ನೋಡಿದರೆ ಸಮರ್ಪಕ ಪಹಣಿ ವಿತರಣೆಯಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ತಾಲ್ಲೂಕು ಕಚೇರಿಯಲ್ಲಿ ಒಂದು ಕೌಂಟರ್‍ನಲ್ಲಿ ಮಾತ್ರ ಪಹಣಿ ವಿತರಿಸುತ್ತಿದ್ದಾರೆ. ಒಬ್ಬ ರೈತನದ್ದೇ ಕನಿಷ್ಠ ಸುಮಾರು 4 ರಿಂದ 5 ಪಹಣಿಗಳು ಇರುವುದರಿಂದ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದ್ದರಿಂದ ರೈತರು ಬೆಳಿಗ್ಗೆ 8 ಗಂಟೆಗೆ ತಮ್ಮ ಹಳ್ಳಿಗಳಲ್ಲಿನ ಕೆಲಸ ಕಾರ್ಯಗಳನ್ನು ಬಿಟ್ಟು ಬಂದು ತಾಲ್ಲೂಕು ಕಚೇರಿಯಲ್ಲಿ ಕಾದು ಕುಳಿತುಕೊಳ್ಳುತ್ತಾರೆ. ಅದರ ಜೊತೆಗೆ ಆತನ ಒಂದು ದಿನದ ಕೆಲಸ ಕಾರ್ಯಗಳೆಲ್ಲ ಪಹಣಿಗಾಗಿಯೇ ವ್ಯರ್ಥವಾಗುತ್ತಿರುವುದರಿಂದ ರೈತ ಅಸಹಾಯಕರಾಗಿ ತಮ್ಮ ಕಷ್ಟವನ್ನು ಯಾರ ಬಳಿಯಲ್ಲಿ ಹೇಳಿಕೊಳ್ಳಬೇಕೆಂದು ತೋಚದೇ ಕಾದು ಕಾದು ಸಾಕಾಗುತ್ತಿದ್ದಾರೆ.

ಕೆಲವೊಮ್ಮೆ ಗಂಟೆಗಟ್ಟಲೆ ಕಾದರೂ ಪಹಣಿ ಸಿಗದೆ ರೈತರು ಕಂಗಾಲಾಗಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಎಷ್ಟೋ ವೇಳೆ ಊಟ,ತಿಂಡಿಯೂ ಇಲ್ಲದೆ ರೈತರು ಪರಿತಪಿಸುತ್ತಾರೆ. ಇನ್ನು ಬಹಳಷ್ಟು ರೈತರು ತಾಲೂಕು ಕಚೇರಿಗೆ ಬರುವುದರಿಂದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯೂ ಸರಿಯಾಗಿಲ್ಲದೆ ತೀವ್ರ ತೊಂದರೆಯಾಗುತ್ತಿದೆ. ಇದೆಲ್ಲ ಸಾಲದೆಂಬಂತೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಮಧ್ಯವರ್ತಿಗಳು ಅಧಿಕಾರಿಗಳೊಂದಿಗೆ ಶಾಮಿಲಾಗಿ ಹೆಚ್ಚಿನ ಹಣ ಪಡೆದು ಪಹಣಿ ನೀಡುತ್ತಿದ್ದಾರೆ. ಹೀಗೆ ರೈತರ ಹಣ ಮಧ್ಯವರ್ತಿಗಳ ಪಾಲಾಗುತ್ತಿದ್ದರೂ ಯಾರೊಬ್ಬರೂ ರೈತರ ಕಷ್ಟ ಕೇಳುವವರಿಲ್ಲದಂತಾಗಿಬಿಟ್ಟಿದೆ.

ಹೊನ್ನವಳ್ಳಿ ಹೋಬಳಿ ನಾಡ ಕಚೇರಿಗೆ ಕಳೆದ ನಾಲ್ಕು ದಿನಗಳಿಂದ ಹೋಗಿ ಹೋಗಿ ಸಾಕಾಗಿದೆ. ಅಲ್ಲಿನ ಅಧಿಕಾರಿಗಳು ಇಲ್ಲಿ ಇಂಟರ್‍ನೆಟ್ ಸಂಪರ್ಕ ಸರಿಯಾಗಿಲ್ಲ ಯಾವುದೇ ಪಹಣಿ ಬರುತ್ತಿಲ್ಲ. ನಿಮಗೆ ಹೆಚ್ಚಿನ ಅವಶ್ಯವಿದ್ದರೆ ತಾಲ್ಲೂಕು ಕಚೇರಿಯಲ್ಲಿ ಪಹಣಿಯನ್ನು ಪಡೆದುಕೊಳ್ಳಬಹುದು ಎಂದು ಸಿಬ್ಬಂದಿ ಉತ್ತರಿಸುತ್ತಾರೆ. ದಿನಗಟ್ಟಲೇ ಕಾದರೂ ಇಲ್ಲಿಯೂ ಪಹಣಿ ಸಿಗುವುದು ಕಷ್ಟದ ಸಂಗತಿಯಾಗಿದೆ. ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಕೊಡಗಿಹಳ್ಳಿ ನಂಜಾಮುರಿ ಮನವಿ ಮಾಡಿದ್ದಾರೆ.ಕಳೆದ 15 ದಿನಗಳಿಂದ ನೊಣವಿನಕೆರೆ ಹೋಬಳಿಯ ನಾಡ ಕಚೇರಿಯಲ್ಲಿ ಪಹಣಿ ನೀಡುತ್ತಿಲ್ಲ. ಕೆಲವರು ಹಿಂದಿನಿಂದ ಹೋಗಿ ಹಣ ಕೊಟ್ಟು ಪಹಣಿ ಪಡೆಯುತ್ತಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಅಲ್ಲಿನ ಅಧಿಕಾರಿಗಳು ಕಟುವಾಗಿ ಮಾತನಾಡುವುದಲ್ಲದೇ ಬೇಕಾದವರಿಗೆ ಮಾತ್ರ ಪಹಣಿ ವಿತರಿಸುತ್ತಿದ್ದಾರೆ.

ಇದರ ಬಗ್ಗೆ ಸೂಕ್ತ ಕ್ರಮಕ್ಕೆ ಮೇಲಧಿಕಾರಿಗಳು ಮುಂದಾಗಬೇಕೆಂದು ನೊಣವಿನಕೆರೆ ಹೋಬಳಿ ಕೈದಾಳದ ನಾಗರತ್ನ ಮತ್ತಿತರರು ಆಗ್ರಹಿಸಿದ್ದಾರೆ.ಹಲವು ಹೋಬಳಿ ಕೇಂದ್ರಗಳಲ್ಲಿ ಸರ್ವರ್ ಡೌನ್ ಎಂಬ ನೆಪವೊಡ್ಡಿ ರೈತರಿಗೆ ಪಹಣಿ ಸೇರಿದಂತೆ ಯಾವುದೇ ದಾಖಲೆಗಳನ್ನು ನೀಡಲು ಸತಾಯಿಸಲಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. ಹೋಬಳಿ ಕೇಂದ್ರಗಳಲ್ಲಷ್ಟೇ ಅಲ್ಲ, ತಾಲೂಕು ಕಚೇರಿಗಳಲ್ಲೂ ಹೆಚ್ಚಿನ ಕಂಪ್ಯೂಟರ್‍ಗಳನ್ನು ಅಳವಡಿಸಿ ಸಿಬ್ಬಂದಿ ಹಾಕಿ ರೈತರಿಗಾಗುತ್ತಿರುವ ಸಮಸ್ಯೆಯನ್ನು ಪರಿಹರಿಸುವ ಅತ್ಯಗತ್ಯವಿದೆ.

 

► Follow us on –  Facebook / Twitter  / Google+

Sri Raghav

Admin