ಪಾಕಿಸ್ತಾನದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಸ್ಫೋಟ: ಸತ್ತವರ ಸಂಖ್ಯೆ 55ಕ್ಕೆ ಏರಿಕೆ
ಕರಾಚಿ, ನ.13-ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿ ಶನಿವಾರ ನಡೆದ ಬಾಂಬ್ ಸ್ಫೋಟದಲ್ಲಿ ಸತ್ತವರ ಸಂಖ್ಯೆ 55ಕ್ಕೇರಿದೆ. 100ಕ್ಕೂ ಹೆಚ್ಚು ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಲಾಸ್ಟೆಲಾ ಜಿಲ್ಲೆಯ ದರ್ಗಾ ಶಾ ನೂರಾಜಿ ಪವಿತ್ರ ಸ್ಥಳದಲ್ಲಿ ನಡೆಯುತ್ತಿದ್ದ ಧಮಾಲ್ ಸೂಫಿ ನೃತ್ಯ ವೀಕ್ಷಿಸಲು ಸಹಸ್ರಾರು ಯಾತ್ರಿಕರು ಸೇರಿದ್ದಾಗ ಈ ಸ್ಫೋಟ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ಈ ವಿಧ್ವಂಸಕ ಕೃತ್ಯದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಈವರೆಗೆ 55 ಮಂದಿ ಮೃತಪಟ್ಟಿದ್ದಾರೆ ಎಂದು ಈದಿ ಟ್ರಸ್ಟ್ ಫೌಂಡೇಷನ್ ಅಧಿಕಾರಿ ಹಶೀಮ್ ಲಾಸ್ಸಿ ತಿಳಿಸಿದ್ದಾರೆ. ಘಟನೆ ನಡೆದ ಸ್ಥಳವು ದುರ್ಗಮ ಪ್ರದೇಶವಾಗಿದ್ದು, ಸ್ಫೋಟದ ನಂತರ ಕತ್ತಲು ಆವರಿಸಿದ್ದರಿಂದ ಮೃತದೇಹಗಳು ಮತ್ತು ಗಾಯಾಳುಗಳನ್ನು ಸ್ಥಳಾಂತರಿಸಲು ಕಷ್ಟವಾದ ಹಿನ್ನೆಲೆಯಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
► Follow us on – Facebook / Twitter / Google+