‘ಪಾಕ್ ಗೆ ಹೋಗಿ ಮೋದಿ ಮದುವೆ ಊಟ ಮಾಡಿಕೊಂಡು ಬರುವುದು ದೇಶದ್ರೋಹವಲ್ಲವೆ’
ರಾಯಚೂರು, ಆ.17- ಪಾಕಿಸ್ತಾನಕ್ಕೆ ಹೋಗಿ ಮೋದಿ ಮದುವೆ ಊಟ ಮಾಡಿಕೊಂಡು ಬರುವುದು ದೇಶದ್ರೋಹವಲ್ಲವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ಬಗ್ಗೆ ಕಿಡಿಕಾರಿದ್ದಾರೆ. ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಪೂರ್ವನಿಗದಿ ಕಾರ್ಯಕ್ರಮವಿಲ್ಲದೆ ಪಾಕಿಸ್ತಾನಕ್ಕೆ ಹೋಗಿ ಮದುವೆ ಊಟ ಮಾಡಿಕೊಂಡು ಬರುವ ಪ್ರಧಾನಿ ಮೋದಿಯವರ ಕ್ರಮಕ್ಕೆ ಏನೆನ್ನಬೇಕು. ಇದು ದೇಶದ್ರೋಹವಲ್ಲವೆ..? ಇಂಥದ್ದಕ್ಕೆಲ್ಲ ಬಿಜೆಪಿಯವರು ಏನೆನ್ನುತ್ತಾರೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಮೇಲೆ ವಿನಾಕಾರಣ ದೇಶದ್ರೋಹದ ಆರೋಪ ಮಾಡುವ ಬಿಜೆಪಿಯವರು ಮೋದಿಯವರ ಈ ಕ್ರಮಕ್ಕೆ ಏನೆಂದು ಹೇಳುತ್ತಾರೆ ಎಂದು ತಿಳಿಸಿದರು.
ನಿನ್ನೆ ಎಬಿವಿಪಿ ಕಾರ್ಯಕರ್ತರ ಮೇಲೆ ನಡೆದ ಪೊಲೀಸರ ಲಾಠಿಚಾರ್ಜ್ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್, ನಿಷೇಧಿತ ಸ್ಥಳಗಳಲ್ಲಿ ಎಬಿವಿಪಿ ಕಾರ್ಯಕರ್ತರು ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಕ್ಕೆ ಪೊಲೀಸರು ಬಲ ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.