‘ಪುಡಿಗಾಸು ಪರಿಹಾರ ಬೇಡ, ಕೃಷಿ ಸಾಲ ಮನ್ನಾ ಮಾಡಿ’ : ಅಧ್ಯಯನ ತಂಡದ ಮುಂದೆ ರೈತರ ಆಕ್ರೋಶ

8

ಹೂವಿನಹಡಗಲಿ,ನ.5- ಪುಡಿಗಾಸು ಪರಿಹಾರ ಬೇಡ, ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡಿ ಎಂದು ರೈತರು ಕೇಂದ್ರದಿಂದ ಆಗಮಿಸಿದ್ದ ಬರ ಅಧ್ಯಯನ ತಂಡದ ಮುಂದೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ತಾಲೂಕಿನ ಇಟ್ಟಿಗಿ ಗ್ರಾಮಕ್ಕೆ ಕೃಷಿ ಇಲಾಖೆಯ ಜಂಟಿ ಕಾರ್ಯದರ್ಶಿ ನಿರಾಜ್ ಆದಿದಾಮ್ ನೇತೃತ್ವದಲ್ಲಿ ಬರ ವೀಕ್ಷಣೆಗೆ ಆಗಮಿಸಿದ ಕೇಂದ್ರ ತಂಡ ಇಟಿಗಿಯ ರೈತ ವಿಶ್ವನಾಥರವರ ಹೊಲದಲ್ಲಿ ಬೆಳೆ ಪರಿಶೀಲನೆ ನಡೆಸಿ, ಸಕಾಲಕ್ಕೆ ಮಳೆ ಬಾರದೆ ಇದ್ದ ಕಾರಣ, ಬಿತ್ತಿದ ಈರುಳ್ಳಿ ಬೆಳೆ ಒಣಗಿ ಹೋಗಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದೇವೆ ಎಂದು ವಿಶ್ವನಾಥ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

ಇದೇ ಸಂದರ್ಭದಲ್ಲಿ ಉತ್ತಂಗಿ ತಾ.ಪಂ. ಸದಸ್ಯ ಕಲಕೇರಿ ವೀರಣ್ಣ ಮಾತನಾಡಿ, ಸತತ ಮೂರು ವರ್ಷಗಳಿಂದ ಬರಗಾಲದ ಭೀತಿ ಈ ಭಾಗದ ಜನರನ್ನು ಕಾಡುತ್ತಿದೆ ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರೂ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಅಡಚಣೆ ಇದ್ದು, ಸರ್ಕಾರ ಸಮರ್ಥವಾಗಿ ಬರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ರೈತ ಸಂಘದ ರಾಜ್ಯ ಘಟಕದ ಮುಖಂಡ ಜಿ.ಎಂ. ವೀರಸಂಗಯ್ಯ ಮಾತನಾಡಿ, ಸತತ ಮೂರು ವರ್ಷಗಳಿಂದ ಬರ ಆವರಿಸಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ರೈತರು ಸಂಕಷ್ಟಕ್ಕೊಳಗಾಗಿದ್ದು, ಕಳೆದ ವರ್ಷ ನೀಡಿದ ಹೆಕ್ಟೇರ್‍ವಾರು ಪರಿಹಾರದಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ, ಪರಿಹಾರ ವಿತರಣೆಯಲ್ಲಿ ತಾರತಮ್ಯಾಗಿದೆ. ಬೆಳೆ ನಷ್ಟಕ್ಕೊಳಗಾದ ರೈತರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ತಾಲೂಕಿನ ಕೃಷಿ ಬೆಳೆಯು 39418 ಹೆಕ್ಟೇರ್ 2141 ಲಕ್ಷ 41 ಸಾವಿರ ರೂ ನಷ್ಟವಾಗಿದ್ದು, ತೋಟಗಾರಿಕೆ ಕ್ಷೇತ್ರದ ಬೆಳೆ 3228 ಹೆಕ್ಟೇರ್ ನಷ್ಟವಾಗಿದ್ದು, ತಾಲೂಕಿನಲ್ಲಿ ಒಟ್ಟು 17122 ಸಾವಿರ ನಷ್ಟವಾಗಿದ್ದು, ಒಟ್ಟು 25 ಕೋಟಿ ರೂ ಬೆಳೆ ನಷ್ಟ ಸಂಭವಿಸಿರುವ ಕುರಿತು ಜಂಟಿ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿರುವುದಾಗಿ ತಹಶೀಲ್ದಾರ್ ವೆಂಕನಗೌಡ ಆರ್. ಪಾಟೀಲ್ ತಿಳಿಸಿದರು.ಕೇಂದ್ರ ತಂಡದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ಆಯುಕ್ತ ಅಶೋಕಗುಪ್ತಾ, ಹಣಕಾಸು ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್.ಸಿ. ಮೀನಾ, ಜಂಟಿ ನಿರ್ದೇಶಕ ಶರಣಪ್ಪ ಮುದಗಲ್, ಸಹಾಯಕ ಕೃಷಿ ನಿರ್ದೇಶಕ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ತಾಲೂಕು ರೈತ ಸಂಘದ ಅಧ್ಯಕ್ಷ ಗಂಗಾಧರ, ಇಟ್ಟಿಗಿ ಗ್ರಾಮದ ರೈತರಾದ ಕೆ.ಶಿವಮೂರ್ತಿ, ಅರಳಿಹಳ್ಳಿ ಸುರೇಶ್, ಬಳಿಗಾರ ಕೊಟ್ರೇಶ್, ಕೆ. ಪಾಟೀಲ್‍ಗೌಡ, ಪಕ್ಕೀರಪ್ಪ ಅಂಬಾಡಿ, ನೂಲಿಬಸಪ್ಪ, ವಸಂತಗೌಡ, ಕೆ. ಕೊಟ್ರಗೌಡ, ಕೆ. ಪಾಟೀಲ್‍ಗೌಡ, ವೀರಣ್ಣ, ಇಸ್ಮಾಯಿಲ್‍ಸಾಬ್, ಗ್ರಾ.ಪಂ. ಅಧ್ಯಕ್ಷ ದೊಡ್ಡವೀರಪ್ಪ, ಗ್ರಾ.ಪಂ. ಅಭಿವೃದ್ದಿ ಅಧಿಕಾರಿ ಶಶಿಕಲಾ ಕೊಪ್ಪದ, ಸದಸ್ಯ ಚಂದ್ರಪ್ಪ, ಗ್ರಾಮ ಲೆಕ್ಕಾಧಿಕಾರಿ ಮೊಮಿನ, ಗ್ರಾಮೀಣ ಕುಡಿಯುವ ನೀರು ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಜಯರಾಂ, ಇತರರು ಇದ್ದರು.

► Follow us on –  Facebook / Twitter  / Google+

Sri Raghav

Admin