ಪೆಟ್ರೋಲ್, ಡೀಸೆಲ್ ದರ ಸಾರ್ವಜನಿಕರ ಆಕ್ರೋಶ
ಬೆಂಗಳೂರು, ಸೆ.1- ಕಳೆದ ಒಂದು ವರ್ಷದಿಂದ ಇಳಿಮುಖವಾಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ನಿನ್ನೆ ರಾತ್ರಿಯಿಂದ ದಿಢೀರ್ ಏರಿಕೆಯಾಗಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದು ವರ್ಷದಿಂದ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಸುಮಾರು ನಾಲ್ಕೈದು ಬಾರಿ ಇಳಿಸಿದ್ದ ಸರ್ಕಾರ ನಿನ್ನೆ ರಾತ್ರಿ ಏಕಾಏಕಿ ದರ ಏರಿಸಿ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಮಧ್ಯರಾತ್ರಿ ನಂತರ ಹಾಗೂ ಬೆಳ್ಳಂಬೆಳಗ್ಗೆ ವಿಷಯ ತಿಳಿಯದೆ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ಳಲು ಬಂಕ್ಗಳಿಗೆ ತೆರಳಿದ್ದ ವಾಹನ ಮಾಲೀಕರಿಗೆ ದರ ಏರಿಕೆಯ ಬಿಸಿ ಮುಟ್ಟಿತು.
ಒಂದು ಹಂತದಲ್ಲಿ ನಿನ್ನೆಯಷ್ಟೇ ಕಡಿಮೆ ದರ ಇದ್ದದ್ದು, ಏಕಾಏಕಿ ಏರಿಕೆಯಾಗಿರುವ ಬಗ್ಗೆ ಬಂಕ್ ಮಾಲೀಕರೊಂದಿಗೆ ಜಗಳಕ್ಕೂ ಇಳಿದರು. ಪ್ರತೀ ಲೀಟರ್ ಪೆಟ್ರೋಲ್ಗೆ 3.38ರೂ. ಹಾಗೂ ಡೀಸೆಲ್ಗೆ 2.67ರೂ. ಹೆಚ್ಚಳ ಮಾಡಲಾಗಿದ್ದು, ವಾಹನ ಸವಾರರಿಗೆ ಇದರಿಂದ ಸಾಕಷ್ಟು ಹೊರೆಯಾಗಲಿದೆ. ವಿಷಯ ತಿಳಿಯದೆ ವಾಗ್ವಾದ ನಡೆಸಿದ್ದು, ಒಂದು ಕಡೆಯಾದರೆ, ದರ ಏರಿಕೆಯಾದ ವಿಷಯ ತಿಳಿದು ಕೆಲವರು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲಾ ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಜನಸಾಮಾನ್ಯರು ಅವಶ್ಯಕ ವಸ್ತುಗಳನ್ನು ಪಡೆಯಲು ಹೆಣಗಾಡುವ ಸ್ಥಿತಿ ಉಂಟಾಗಿದೆ. ಇದರ ನಡುವೆ ಮತ್ತೆ ಪೆಟ್ರೋಲ್, ಡೀಸೆಲ್ನ ದರ ಏರಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ ಕೇಳಿ ಬಂದಿದೆ.
► Follow us on – Facebook / Twitter / Google+