ಪೊಲೀಸರ ವಿರುದ್ಧ ವಿಡಿಯೋ ಹಾಕಿದ್ದರೆ ಕ್ರಿಮಿನಲ್ ಕೇಸ್

Police--01

ಬೆಂಗಳೂರು, ಸೆ.22-ಫೇಸ್‍ಬುಕ್ ಹಾಗೂ ವಾಟ್ಸಪ್‍ಗಳಲ್ಲಿ ಪೊಲೀಸರ ವಿರುದ್ಧ ಪದೇ ಪದೇ ಅವಹೇಳನಕಾರಿ ಹಾಗೂ ಆಕ್ಷೇಪಾರ್ಹ ವಿಡಿಯೋಗಳು ಮತ್ತು ಸಂದೇಶಗಳನ್ನು  ಪೋಸ್ಟ್ ಮಾಡುವವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರ್ಯಾಫಿಕ್ ಪೊಲೀಸರ ಜೊತೆ ಜಗಳ ಮಾಡಿಕೊಂಡು ಆ ವಿಡಿಯೋಗಳನ್ನು ಫೇಸ್‍ಬುಕ್‍ನಲ್ಲಿ ಹಾಕುವುದು ಫ್ಯಾಷನ್ ಆಗಿ ಹೋಗಿದೆ. ಇತ್ತೀಚೆಗೆ ಇಂತಹ ಒಂದು ಘಟನೆಯನ್ನು ಗಮನಿಸಿದ್ದೇನೆ. ತನಿಖೆಗೂ ಆದೇಶಿಸಿದ್ದೇನೆ. ನಮ್ಮ ಪೊಲೀಸ ಸಿಬ್ಬಂದಿ ಟೆಂಪೋ ಡ್ರೈವರ್‍ನಿಂದ ಹಣ ಪಡೆದು ಕೇಸ್ ಹಾಕಿರುವುದು ನಿಜ. ರಸೀದಿ ಕೊಡಲು ವಿಳಂಬವಾಗಿದೆ. ಆ ಮಾರ್ಗದಲ್ಲಿ ಮುಖ್ಯಮಂತ್ರಿಯವರು ಬರುತ್ತಿದ್ದರಿಂದ ಸಂಚಾರ ನಿಯಂತ್ರಿಸುವ ಒತ್ತಡದಲ್ಲಿದ್ದು, ರಸೀದಿ ಕೊಡುವುದು ವಿಳಂಬವಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಂತಹ ವಿಡಿಯೋ ಪೋಸ್ಟ್ ಗಳು ಸತ್ಯವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಅಪಪ್ರಚಾರಕ್ಕಕಾಗಿ ಸುಳ್ಳು ವಿಡಿಯೋಗಳನ್ನು ಹಾಕುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೈಬರ್ ಕ್ರೈಂಗೆ ಸೂಚಿಸಲಾಗಿದೆ. ಇಂತಹ ಘಟನೆಗಳು ನಡೆದಾಗ ವಿಡಿಯೋ ತೆಗೆದು ಫೇಸ್ ಬುಕ್ ಗೆ ಹಾಕುವ ಬದಲು ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ ಎಂದು ಸಲಹೆ ನೀಡಿದರು.

ಮಂಗಳೂರಿನಲ್ಲಿ ಪಿಎಸ್‍ಐ ವಿರುದ್ಧ ಬಹಿರಂಗವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಹಿಂದೂ ಸಂಘಟನೆಯ ಜಗದೀಶ್ ಕಾರಂತ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ ಕಾನೂನು ಒಂದೇ. ನಾವಿರಲಿ, ಇಲ್ಲದಿರಲಿ ಪೊಲೀಸ್ ವ್ಯವಸ್ಥೆಯನ್ನು ಅವಹೇಳನ ಮಾಡುವುದು ಸರಿಯಲ್ಲ. ಯಾರೇ ಎಷ್ಟೇ ದೊಡ್ಡವರಾಗಿದ್ದರೂ ಕ್ರಮಕೈಗೊಳ್ಳದೆ ಬಿಡುವುದಿಲ್ಲ. ನಾನು ಗೃಹ ಸಚಿವನಾಗಿರುವವರೆಗೂ ಪೊಲೀಸರ ಅವಹೇಳನವನ್ನು ಸಹಿಸುವುದಿಲ್ಲ ಎಂದರು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ವಿಶೇಷ ತನಿಖಾದಳ ಸರಿಯಾದ ದಿಕ್ಕಿನಲ್ಲಿ ತನಿಖೆ ಮಾಡುತ್ತಿದೆ. ಎಡಪಂಥೀಯರು ಮತ್ತು ಬಲಪಂಥೀಯರು ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಎಸ್‍ಐಟಿಗೆ ಸೂಚನೆ ನೀಡಲಾಗಿದೆ. ಮಾಧ್ಯಮದಲ್ಲಿ ಪ್ರಸಾರವಾಗುವ ಸುದ್ದಿಗಳಿಗೂ ಒತ್ತು ಕೊಡಬಾರದು ಎಂಬ ತಾಕೀತು ಮಾಡಿದ್ದು, ತನಿಖಾದಳ ಯಾವುದೇ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಹೇಳಿದರು.
ಟೆಲಿಫೋನ್ ಕದ್ದಾಲಿಕೆ ನಡೆಯುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ಮೌಖಿಕ ಆರೋಪ ಆಧರಿಸಿ ತನಿಖೆ ನಡೆಸಲು ಸಾಧ್ಯವಿಲ್ಲ. ಅವರ ಬಳಿ ಸೂಕ್ತ ದಾಖಲೆಗಳಿದ್ದರೆ ಅದರ ಜೊತೆ ಲಿಖಿತವಾಗಿ ದೂರು ನೀಡಲಿ. ಆಗ ತನಿಖೆ ನಡೆಸಲು ಸುಲಭವಾಗಲಿದೆ. ಅದನ್ನು ಹೊರತುಪಡಿಸಿ ರಾಜಕೀಯ ಕಾರಣಕ್ಕೆ ಆರೋಪ ಮಾಡಿದರೆ ಅದನ್ನು ತನಿಖೆ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

Sri Raghav

Admin