ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರಿಂದ ಮನನೊಂದು ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ

ABVP-Suicide

ಚಿಕ್ಕಮಗಳೂರು,ಜ.11-ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ದೂರು ದಾಖಲಾಗಿದೆ. ಇದರಿಂದ ನನ್ನ ಲೈಫೇ ಹಾಳಾಯ್ತು.. ಹೀಗಂತ ಮರಣಪತ್ರ ಬರೆದಿಟ್ಟು ಬಿ.ಕಾಂ ವಿದ್ಯಾರ್ಥಿ ಹಾಗೂ ಎಬಿವಿಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶೃಂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.   ಎಬಿವಿಪಿ ಕಾರ್ಯಕರ್ತನಾಗಿದ್ದ ಬಿ.ಕಾಂ ವಿದ್ಯಾರ್ಥಿ ಅಭಿಷೇಕ್(21) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.  ಕಳೆದ 7ರಂದು ಶೃಂಗೇರಿಯಲ್ಲಿ ಹುತಾತ್ಮ ಯೋಧರಿಗೆ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಮುಖ್ಯ ಭಾಷಣಕಾರರನ್ನಾಗಿ ಆಹ್ವಾನ ನೀಡಲಾಗಿತ್ತು.

ಆದರೆ ಯಾವುದೇ ಕಾರಣಕ್ಕೂ ಸೂಲಿಬೆಲೆ ಅವರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು, ಒಂದು ವೇಳೆ ಅವಕಾಶ ನೀಡಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎನ್‍ಎಸ್‍ಯುಐ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು.  ಈ ಕುರಿತಂತೆ ಎನ್ ಎಸ್‍ಯುಐ ಹಾಗೂ ಎಬಿವಿಪಿ ಕಾರ್ಯಕರ್ತರ ನಡುವೆ ಚಕಮಕಿ ನಡೆದಿತ್ತು. ಈ ಎರಡೂ ಸಂಘಟನೆಗಳ ಗಲಾಟೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿ ಎಬಿವಿಪಿಯ ನಾಲ್ವರು ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿತ್ತು.

ದೂರು ದಾಖಲಾದ ನಾಲ್ವರು ವಿದ್ಯಾರ್ಥಿಗಳಲ್ಲಿ ಅಭಿಷೇಕ್ ಕೂಡ ಒಬ್ಬನಾಗಿದ್ದ. ತನ್ನ ವಿರುದ್ದ ದೂರು ದಾಖಲಾದ್ದರಿಂದ ಮನನೊಂದಿದ್ದ ಅಭಿಷೇಕ್ ಡೆತ್ ನೋಟ್ ಬರೆದಿಟ್ಟು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್‍ನಲ್ಲಿ ನನ್ನ ವಿರುದ್ಧ ದೂರು ದಾಖಲಾದ್ದರಿಂದ ನನ್ನ ಲೈಫೇ ಹಾಳಾಯ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದು ಸಾವನ್ನಪ್ಪಿದ್ದಾನೆ. ಶೃಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin