ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆ ಕುರಿತು ಸಿನಿಮಾ ಮಾಡಲಿರುವ ಜಾನ್
ಜಾನ್ ಅಬ್ರಾಹಾಂ-ಬಾಲಿವುಡ್ನ ಅತ್ಯಂತ ಕ್ರಿಯಾಶೀಲ ನಟರಲ್ಲಿ ಒಬ್ಬ. ಸದಾ ಹೊಸತನದ ತುಡಿತವಿರುವ ಅನ್ವೇಷಣಾತ್ಮಕ ಮನಸ್ಥಿತಿಯ ಈ ಸ್ಪುರದ್ರೂಪಿ ನಟ ಹಿಂದಿನ ಸಿನಿಮಾಗಳಲ್ಲಿ ಹೊಸತನವನ್ನು ಸಾಬೀತು ಮಾಡಿದ್ದಾನೆ. ಜಾನ್ನ ಮುಂದಿನ ಪ್ರಾಜೆಕ್ಟ್ ಪೋಕ್ರಾನ್ ನ್ಯೂಕ್ಲಿಯರ್ ಟೆಸ್ಟ್. 1998ರಲ್ಲಿ ಆಗಿನ ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ನಡೆದ ಯಶಸ್ವಿ ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆಯಿಂದ ಇಡೀ ವಿಶ್ವವೇ ಭಾರತದತ್ತ ನಿಬ್ಬೆರಗಾಗಿ ನೋಡಿತ್ತು. ಈ ಅದ್ಭುತ ವಿದ್ಯಮಾನವನ್ನೇ ಕಥಾ ವಸ್ತುವನ್ನಾಗಿ ಮಾಡಿಕೊಂಡು ಜಾನ್ ಹೊಸ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾನೆ. ಅಲ್ಲದೇ ಈ ಚಿತ್ರದ ನಾಯಕ ನಟನೂ ಈತನೇ.
ಜಾನ್ ಅಬ್ರಾಹಾಂನ ಜೆಎ ಎಂಟರ್ಟೈನ್ಮೆಂಟ್ ಈ ಹೊಸ ಪ್ರಾಜೆಕ್ಟ್ಗೆ ಕೈ ಹಾಕಿದೆ. ಈ ಹಿಂದೆ ಬಾಲಿವುಡ್ ನಟನ ಹೋಮ್ ಬ್ಯಾನರ್ನಲ್ಲಿ ವಿಕ್ಕಿ ಡೋನರ್ ಮತ್ತು ಮದ್ರಾಸ್ ಕೆಫೆ ಸಿನಿಮಾಗಳು ನಿರ್ಮಾಣವಾಗಿದ್ದವು. ಇದಕ್ಕಾಗಿ ಈಗ ಕ್ರಿಯಾಜ್ ಎಂಟರ್ಟೈನ್ಮೆಂಟ್ ಸಂಸ್ಥೆ ಜತೆ ಜಾನ್ ಕೈಜೋಡಿಸಿದ್ದಾನೆ. ಈ ಸಿನಿಮಾದ ಟೈಟಲ್ ಬಗ್ಗೆ ಇನ್ನು ನಿರ್ಧಾರವಾಗಿಲ್ಲ. ತೇರೆ ಬಿನ್ ಲಾಡೆನ್ ನಿರ್ದೇಶಕ ಅಭಿಷೇಕ್ ಶರ್ಮಾ ಹೊಸ ಯೋಜನೆಗೆ ಆಕ್ಷನ್-ಕಟ್ ಹೇಳಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಪ್ರಾಜೆಕ್ಟ್ಗಾಗಿ ಅವರು ನಿರ್ದಿಷ್ಟ ಕಥೆ ಹುಡುಕಾಟ ನಡೆಸಿದ್ದರು.
ನಾನು ಚಿತ್ರ ನಿರ್ಮಾಣಕ್ಕೆ ಎಂದಿಗೂ ಅವಸರ ಮಾಡುವುದಿಲ್ಲ. ನಾನು ವಿಷಯ, ಸಾರಾಂಶ, ಸ್ಕ್ರಿಪ್ಟ್ ಮತ್ತು ಕಥೆಗೆ ಹೆಚ್ಚಿನ ಗಮನ ನೀಡುತ್ತೇನೆ. ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚಿತ್ರ ಮಾಡಬೇಕೆಂಬ ಇರಾದೆ ನನ್ನದು. ನನ್ನ ಅಭಿರುಚಿಗೆ ಅನುಗುಣವಾಗಿ ಉತ್ತಮ ಚಿತ್ರ ಮೂಡಿಬರಬೇಕೆಂಬ ಬಯಕೆ ನನ್ನದಾಗಿದೆ ಎಂದು ಜಾನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾನೆ.
< Eesanje News 24/7 ನ್ಯೂಸ್ ಆ್ಯಪ್ >