ಪ್ರತಿ ರೈತರಿಗೆ 15 ಸಾವಿರ ಪರಿಹಾರ ನೀಡಲು ಆಗ್ರಹ

krv

ಬೇಲೂರು, ಅ.26-ತಾಲೂಕಿನಲ್ಲಿ ಉದ್ಬವಿಸಿರುವ ಬರ ಸ್ಥಿತಿಯನ್ನು ಶಾಸಕರು ಮತ್ತು ತಹಸೀಲ್ದಾರರು ವೀಕ್ಷಿಸಿ, ತಾಲೂಕಿನ ಪ್ರತಿಯೊಬ್ಬ ರೈತರಿಗೂ ಕನಿಷ್ಠ 15 ಸಾವಿರ ರೂಗಳನ್ನು ಬರ ಪರಿಹಾರ ರೂಪದಲ್ಲಿ ಕೊಡಬೇಕು ಮತ್ತು ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರವೇ(ಪ್ರವೀಣ್‍ಶೆಟ್ಟಿ) ಬಣದ ಕಾರ್ಯಕರ್ತರು ಇಲ್ಲಿನ ಉಪ ತಹಸೀಲ್ದಾರ್ ಕೃಷ್ಣಮೂರ್ತಿಯವರಿಗೆ ಮನವಿ ಪತ್ರ ಸಲ್ಲಿಸಿದರು. ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ವಿ.ಎಸ್.ಭೋಜೇಗೌಡ, ಈ ಬಾರಿ ಮಳೆಬಾರದ ಕಾರಣ ತಾಲೂಕಿನಲ್ಲಿ ಬರದ ಸ್ಥಿತಿ ನಿರ್ಮಾಣವಾಗಿದ್ದರೂ ಶಾಸಕ ವೈ.ಎನ್.ರುದ್ರೇಶ್‍ಗೌಡರಾಗಲಿ ಅಥವಾ ತಹಸೀಲ್ದಾರರಾಗಲಿ ತಾಲೂಕಿನಲ್ಲಿನ ಬರದ ವೀಕ್ಷಣೆಗೆ ಹೋಗದೆ ರೈತರ ಕಷ್ಟಗಳನ್ನು ತಿಳಿದುಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದರು.

ಅಲ್ಲದೆ ಚುನಾವಣೆ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೂ ತೆರಳುವ ಶಾಸಕರು ಮತ್ತು ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು ಬರದ ಸಂದರ್ಭ ಎಲ್ಲಿ ಏನು ಮಾಡುತಿದ್ದಾರೆ. ಇವರಿಗೆ ತಾಲೂಕಿನ ರೈತರ ಹಿತಕಿಂತ ತಮ್ಮ ರಾಜಕೀಯವೆ ಮೇಲಾಗಿದೆ ಎಂದು ಕಿಡಿಕಾರಿದರು. ಅಲ್ಲದೆ ತಾಲೂಕಿನಲ್ಲಿ ಕಾಲುವೆಗಳು, ಹೊಳೆಗಳಿಲ್ಲದೆ ಮಳೆಯನ್ನೆ ಆಶ್ರಯಿಸಿ ಬೆಳೆ ಬೆಳೆಯುತಿದ್ದರು. ಆದರೆ ಈ ಬಾರಿ ಮಳೆಯಿಲ್ಲದೆ ತಾಲೂಕಿನ ರೈತರು ಕಂಗಾಲಾಗಿರುವುದರಿಂದ ತಾಲೂಕು ಆಡಳಿತ ಪ್ರತಿಯೊಂದು ಗ್ರಾಮಗಳೀಗೂ ತೆರಳಿ ಅಲ್ಲಿನ ವಸ್ತು ಸ್ಥಿತಿಯನ್ನು ತಿಳಿಯಬೇಕು. ಪ್ರತಿಯೊಂದು ಗ್ರಾಮಗಳಿಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಬೇಕು. ಜನರಿಗೆ ಹಾಗೂ ದನಕರುಗಳಿಗೆ, ಪ್ರಾಣಿ ಪಕ್ಷಿಗಳಿಗೆ ಮೇವು ಹಾಗೂ ನೀರು ಸಿಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.ಕರವೇ(ಪ್ರವೀಣ್‍ಶೆಟ್ಟಿ) ಬಣದ ಉಪಾಧ್ಯಕ್ಷ ರಾಘವೇಂದ್ರಹೊಳ್ಳ, ಪ್ರ.ಕಾರ್ಯದರ್ಶಿ ಜಯಪ್ರಕಾಶ್, ಮುಖಂಡರಾದ ಕಲಾಶ್ರೀ ದೀಪು, ಮಂಜುನಾಥ್ ಇನ್ನಿತರರಿದ್ದರು.

 

► Follow us on –  Facebook / Twitter  / Google+

Sri Raghav

Admin