ಪ್ರತ್ಯೇಕ ಅನುದಾನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಮಳವಳ್ಳಿ, ಜ.30– ಎಲ್ಲಾ ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ನೀಡುವ ಜೊತೆಗೆ ವೇತನ ನೀಡಿಕೆಗಾಗಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಲು ಆಗ್ರಹಿಸಿ ನಾಳೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದುಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ. ರಾಮಕೃಷ್ಣ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸಿಇಟಿಯು ನಡೆಸಿದ ಪ್ರಬಲ ಹೋರಾಟದ ಫಲವಾಗಿ ಕನಿಷ್ಠ ವೇತನವನ್ನು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದ್ದು , ಆದರೆ ಮಂಡ್ಯ ಜಿಲ್ಲೆಯಲ್ಲಿ ಬರಗಾಲದ ಕಾರಣ ಮುಂದೊಡ್ಡಿ ಎಲ್ಲಾ ಗ್ರಾಪಂಗಳು ನೌಕರರಿಗೆ ಕನಿಷ್ಠ ವೇತನವನ್ನು ಇನ್ನೂ ಜಾರಿಗೊಳಿಸದೆ ನೌಕರರನ್ನು ವಂಚಿಸುತ್ತಿವೆ ಎಂದು ಆರೋಪಿಸಿದರು.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಾ ಪಂ ಗಳು ಕನಿಷ್ಠ ವೇತನವಾಗಿ 18 ಸಾವಿರ ರೂ.ಗಳನ್ನು ನೀಡಬೇಕು ಮತ್ತು ನೌಕರರಿಗೆ ವೇತನ ನೀಡುವ ಸಲುವಾಗಿ ಪ್ರತ್ಯೇಕ ಅನುದಾನವನ್ನು ಪಂಚಾಯ್ತಿಗಳಿಗೆ ನೀಡಬೇಕು ಎಂದು ಆಗ್ರಹಿಸಿ ಬರುವ 31 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ಧಿಷ್ಠಾವಧಿ ಧರಣಿ ಹಮ್ಮಿಕೊಂಡಿರುವುದಾಗಿ ಅವರು ತಿಳಿಸಿದರು. ಈ ಧರಣಿಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಮಂಡ್ಯ ಜಿಲ್ಲೆಯಿಂದಲೂ ಎಲ್ಲಾ ನೌಕರರು ತಪ್ಪದೆ ಭಾಗವಹಿಸಬೇಕೆಂದು ಅವರು ಕೋರಿದರು. ಸಂಘದ ತಾಲ್ಲೂಕು ಅಧ್ಯಕ್ಷ ಚಲುವರಾಜು, ಪ್ರಧಾನ ಕಾರ್ಯದರ್ಶಿ ಹೆಚ್ ತಿಮ್ಮೇಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin