ಪ್ರಥಮ ಬಾರಿಗೆ ಅಪರೂಪದ ಅಪರಿಚಿತ ಧೂಮಕೇತು ದರ್ಶನ
ವಾಷಿಂಗ್ಟನ್, ಜ.3-ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ನಾಸಾ ವಿಜ್ಞಾನಿಗಳು ಗುರುತಿಸಿರುವ ವಿರಳ ಧೂಮಕೇತುವೊಂದನ್ನು ಈ ವಾರ ಪ್ರಥಮ ಬಾರಿಗೆ ಕೇವಲ ಬೈನಾಕ್ಯುಲರ್ ಮೂಲಕ ವೀಕ್ಷಿಸುವ ಅವಕಾಶ ಖಗೋಳ ವಿಜ್ಞಾನ ಆಸಕ್ತರಿಗೆ ಲಭಿಸಿದೆ. ಈ ಧೂಮಕೇತು ಭೂಮಿಗೆ ಯಾವುದೇ ಹಾನಿ ಮಾಡುವುದಿಲ್ಲ. ಕೆಲಕಾಲ ಗೋಚರಿಸುವ ಈ ಅಪರೂಪದ ಆಕಾಶಕಾಯವು ತನ್ನ ಕಕ್ಷೆಯಲ್ಲಿ ಸೌರವ್ಯೂಹದ ಹೊರ ಮೇಲ್ಮೈಗೆ ಹಿಂದಿರುಗುತ್ತದೆ. ಅಚ್ಚರಿಯ ಸಂಗತಿ ಎಂದರೆ ಧೂಮಕೇತು ತನ್ನ ಕಕ್ಷೆಯಲ್ಲಿ ಒಂದು ಪ್ರದಕ್ಷಿಣೆ ಹಾಕಲು ನೂರಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಂದಾಜು ಮಾಡಲಾಗಿದೆ.
ಉತ್ತಮ ಬೈನಾಕ್ಯುಲರ್ ಮೂಲಕ ಈ ಧೂಮಕೇತುವನ್ನು ವೀಕ್ಷಿಸಬಹುದಾಗಿದೆ. ಆದರೆ ಈ ಗಗನಕಾಯದ ಚಲನೆಯ ವಿದ್ಯಮಾನವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಧೂಮಕೇತುವಿನ ಪ್ರಖರತೆ ಎಷ್ಟಿರುತ್ತದೆ ಎಂಬುದನ್ನು ಖಚಿತವಾಗಿ ತಿಳಿಸುವುದು ಅಸಾಧ್ಯ ಎನ್ನುತ್ತಾರೆ ನಾಸಾದ ಭೂಮಿ ಸಮೀಪದ ಆಕಾಶಕಾಯಗಳ ಅಧ್ಯಯನ ಕೇಂದ್ರದ (ಸೆಂಟರ್ ಫಾರ್ ನಿಯರ್ ಅರ್ಥ್ ಆಬ್ಜೆಕ್ಟ್ ಸ್ಟಡೀಸ್-ಎನ್ಇಒ) ವ್ಯವಸ್ಥಾಪಕ ಪಾಲ್ ಚೋಡಾನ್. ಆಗ್ನೇಯ ಆಗಸದಲ್ಲಿ ಈ ವರ್ಷದ ಆರಂಭದಲ್ಲಿ ಸೂರ್ಯೋದಯಕ್ಕೆ ಸ್ವಲ್ಪ ಮುನ್ನ ಉತ್ತರ ಗೋಳಾರ್ಧದ (ನಾತ್ ಹೆಮಿಸ್ಪಿಯರ್) ಜನರಿಗೆ ಧೂಮಕೇತು ಗೋಚರಿಸುವ ಸಾಧ್ಯತೆ ಇದೆ. ಅದು ಕಾಲಕ್ರಮೇಣ ದಕ್ಷಿಣದತ್ತ ಚಲಿಸಿ ಜ.14ರಂದು ಬುಧ ಗ್ರಹದ ಮೂಲಕ ಹಾದು ಹೋಗುವ ಕಕ್ಷೆಯಲ್ಲಿ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿರುತ್ತದೆ. ಬಳಿಕ ಅದು ಸೌರವ್ಯೂಹದ ಹೊರಪದರದಲ್ಲಿರುವ ತನ್ನ ಕಕ್ಷೆಗೆ ಹಿಂದಿರುತ್ತದೆ.