ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ಭಾರೀ ಅವ್ಯವಹಾರ, ಸಿಬಿಐ ತನಿಖೆಗೆ ಆಗ್ರಹ

Pradhan--01

ಬೆಂಗಳೂರು, ನ.9- ದೇಶದ ರೈತರ ಹಿತ ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಿಸಾನ್ ಕೇತ್ ಮಜ್ದೂರ್ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ಈ ಕುರಿತು ಬೆಂಗಳೂರಿನ ಸಿಬಿಐನ ಭ್ರಷ್ಟಾಚಾರ ನಿಗ್ರಹ ಶಾಖೆಯ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವ ಘಟಕದ ಅಧ್ಯಕ್ಷ ಸಚಿನ್ ಮೀಗಾ ಈ ಯೋಜನೆಯಿಂದ ರೈತರಿಗೆ ಪ್ರಯೋಜನವಾಗುವ ಬದಲು ವಿಮಾ ಕಂಪೆನಿಗಳಿಗೆ ದೊಡ್ಡ ಮಟ್ಟದ ಲಾಭವಾಗಿದೆ. ರೈತರಿಗೆ ಬೆಳೆ ವಿಮೆ ನೀಡುವಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ವಿಮಾ ಕಂಪೆನಿಗಳು ಈ ಯೋಜನೆ ಮೂಲಕ 15,891 ಕೋಟಿ ರೂ.ಗಳ ಪ್ರೀಮಿಯಂ ಸಂಗ್ರಹಿಸಿವೆ. ಅಲ್ಲದೆ, 10 ಸಾವಿರ ಕೋಟಿ ರೂ.ಗಳಿಗೂ ಅಧಿಕ ಲಾಭ ಗಳಿಸಿವೆ ಎಂದು ಮೀಗಾ ದೂರಿದ್ದಾರೆ.

ನಿಯಂತ್ರಕರು ಮತ್ತು ಮಹಾಲೇಖಪಾಲಕರ (ಸಿಎಜಿ) ವರದಿಯಲ್ಲಿ ಈ ಅಂಶಗಳು ಉಲ್ಲೇಖವಾಗಿವೆ. ಅಲ್ಲದೆ, ವಿಜ್ಞಾನ ಮತ್ತು ಕೃಷಿ ತಂತ್ರಜ್ಞಾನ ಕೇಂದ್ರದ ಮುಖ್ಯಸ್ಥರೂ ಸಹ ಇದನ್ನು ಉಲ್ಲೇಖಿಸಿದ್ದಾರೆ. ರೈತರಿಗೆ ಪರಿಹಾರ ನೀಡುವ ಈ ಯೋಜನೆಯಲ್ಲಿ ನಡೆದಿರುವ ದೊಡ್ಡ ಮಟ್ಟದ ಅವ್ಯವಹಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಅವರು ಆಗ್ರಹ ಪಡಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಗಳು, ರೈತರು ಮತ್ತು ವಿಮಾ ಕಂಪೆನಿಗಳನ್ನೊಳಗೊಂಡ ರೈತ ಸ್ನೇಹಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಜಾರಿಗೆ ತಂದಿತ್ತು.

Sri Raghav

Admin