ಪ್ರಧಾನಿ ನಿವಾಸದ ಬಳಿ ಪ್ರತಿಭಟಿಸಿದ ಟಿಡಿಪಿ ಸಂಸದರು ವಶಕ್ಕೆ
ನವದೆಹಲಿ, ಏ.8-ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಸಂಸತ್ ಕಲಾಪಕ್ಕೆ ಸತತ 23 ದಿನಗಳ ಕಾಲ ಅಡ್ಡಿಪಡಿಸಿದ್ದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸದರು ತಮ್ಮ ಬೇಡಿಕೆಗಾಗಿ ಹೋರಾಟ ಮುಂದುವರಿಸಿದ್ದಾರೆ. ರಾಜಧಾನಿ ನವದೆಹಲಿಯ ನಂ.7, ಲೋಕ ಕಲ್ಯಾಣ ಮಾರ್ಗ್ನಲ್ಲಿರುವ ಪ್ರಧಾನಿ ನರೇಂಧ್ರ ಮೋದಿ ನಿವಾಸ ಮುಂದೆ ಪ್ರತಿಭಟನೆ ನಡೆಸಲು ಸದಸ್ಯರು ಮುಂದಾದಾಗ ಪೊಲೀಸರು ಮತ್ತು ಸಿಆರ್ಪಿಎಫ್ ಸಿಬ್ಬಂದಿ ತೆಲುಗು ದೇಶಂ ಸಂಸದರನ್ನು ವಶಕ್ಕೆ ಪಡೆದರು.
ಇಂದು ಬೆಳಗ್ಗೆ ರಾಜ್ಯಸಭಾ ಸದಸ್ಯ ಮತ್ತು ಕೇಂದ್ರದ ಮಾಜಿ ಸಚಿವ ವೈ.ಎಸ್.ಚೌಧರಿ ನಿವಾಸದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಿದ ಸಂಸದರು ನಂತರ ಪ್ರಧಾನಿ ನಿವಾಸದ ಬಳಿ ಪ್ರತಿಭಟನೆಗೆ ಮುಂದಾದರು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಲಭಿಸುವ ತನಕ ದೆಹಲಿಯಲ್ಲಿ ಪ್ರತಿಭಟನೆ ಮತ್ತು ಹೋರಾಟ ಮುಂದುವರಿಸುವಂತೆ ಟಿಡಿಪಿ ನಾಯಕ ಮತ್ತು ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸಂಸದರಿಗೆ ಕರೆ ನೀಡಿದ್ದರು.