ಪ್ರಧಾನಿ ಮೋದಿ ವಿರುದ್ಧ ಸಿಬಿಐ ತನಿಖೆಗೆ ಕೋರ್ಟ್ ನಕಾರ
ನವದೆಹಲಿ, ಜು.16-ರಕ್ಷಣಾ ಸಚಿವಾಲಯದಲ್ಲಿನ ಭ್ರಷ್ಟಾಚಾರ ಆರೋಪಗಳ ಕುರಿತು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ವಜಾಗೊಂಡ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ವಿಶೇಷ ನ್ಯಾಯಾಲಯವೊಂದು ತಳ್ಳಿ ಹಾಕಿದೆ. ಯಾವುದೇ ಲಂಚ ಅಥವಾ (ಯಾವುದೇ) ಬೆಲೆಬಾಳುವ ವಸ್ತುವನ್ನು ಪಡೆದ ಬಗ್ಗೆ ಪ್ರಧಾನಮಂತ್ರಿಯವರ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಹೇಳಿರುವ ವಿಶೇಷ ನ್ಯಾಯಾಧೀಶ ವೀರೇಂದ್ರ ಕುಮಾರ್ ಗೋಯೆಲ್, ಈ ಅರ್ಜಿ ಅಂಗೀಕಾರಕ್ಕೆ ಯೋಗ್ಯವಲ್ಲ ಎಂದು ಅದನ್ನು ವಜಾಗೊಳಿಸಿದರು.
ಶಿಸ್ತು ಉಲ್ಲಂಘನೆ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಂಡ ರಕ್ಷಣಾ ಸಚಿವಾಲಯದ ಮಾಜಿ ಉದ್ಯೋಗಿ ಕೆ.ಎನ್.ಮಂಜುನಾಥ ಅವರು ಖಾಸಗಿ ದೂರೊಂದನ್ನು ಕೋರ್ಟ್ಗೆ ಸಲ್ಲಿಸಿದ್ದರು. ರಕ್ಷಣಾ ಸಚಿವಾಲಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಚಟುವಟಿಕೆಗಳ ಕುರಿತು ಉನ್ನತಾಧಿಕಾರಿಗಳು ಮತ್ತು ಪ್ರಧಾನಮಂತ್ರಿ.ಯವರ ಗಮನಕ್ಕೆ ತರಲಾಗಿದೆ. ಆದರೆ ಇದರ ಬಗ್ಗೆ ಸೂಕ್ರ ಕ್ರಮ ಕೈಗೊಳ್ಳಲು ನರೇಂದ್ರ ಮೋದಿ ವಿಫಲರಾಗಿದ್ಧಾರೆ ಎಂದು ಅವರು ಆರೋಪಿಸಿದ್ದರು.
< Eesanje News 24/7 ನ್ಯೂಸ್ ಆ್ಯಪ್ >