ಪ್ರಯಾಣಿಕರೇ, ಕೆಎಸ್‌ಆರ್‌ಟಿಸಿ-ಬಿಎಂಟಿಸಿ ಬಸ್ ಹತ್ತುವ ಮೊದಲು ಜೇಬು ಭದ್ರಮಾಡ್ಕೊಳಿ..!

BUs-KSRTC

ಬೆಂಗಳೂರು, ಜೂ.5- ಒಂದೆಡೆ ಇಂಧನಗಳ ಬೆಲೆ ಏರಿಕೆ, ಮತ್ತೊಂದೆಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದ ನಡುವೆಯೇ ಪ್ರಯಾಣಿಕರ ಜೇಬಿಗೆ ಕೆಎಸ್‍ಆರ್‍ಟಿಸಿ ಕತ್ತರಿ ಹಾಕಲು ಮುಂದಾಗಿದೆ. ಅತಿ ಶೀಘ್ರದಲ್ಲೇ ಕೆಎಸ್‍ಆರ್‍ಟಿಸಿ ಪ್ರಯಾಣ ದರವನ್ನು ಹೆಚ್ಚಳ ಮಾಡಲು ತೀರ್ಮಾನಿಸಿದ್ದು, ಸರ್ಕಾರದ ಅನುಮತಿಗಾಗಿ ಎದುರು ನೋಡುತ್ತಿದೆ. ಒಂದು ವೇಳೆ ಸರ್ಕಾರ ದರ ಏರಿಕೆಗೆ ಸಮ್ಮತಿಸಿದರೆ ಇದೇ ತಿಂಗಳ 10ರ ನಂತರ ಪ್ರತಿ ಕಿಲೋ ಮೀಟರ್‍ಗೆ 1ರೂ. ರಿಂದ 1.50ರೂ. ಏರಿಕೆಯಾಗಲಿದೆ ಎಂದು ತಿಳಿದುಬಂದಿದೆ.

ಈಶಾನ್ಯ, ವಾಯುವ್ಯ, ನೈಋತ್ಯ ಮತ್ತು ಆಗ್ನೇಯ ಸಾರಿಗೆ ಸಂಸ್ಥೆಗಳು ತೀವ್ರ ನಷ್ಟ ಅನುಭವಿಸುತ್ತಿರುವುದರಿಂದ ಹೊರೆಯನ್ನು ತಪ್ಪಿಸಲು ದರ ಏರಿಕೆ ಅನಿವಾರ್ಯ ಎಂಬುದು ಸಂಸ್ಥೆಯ ವಾದವಾಗಿದೆ. ಕಳೆದ ವರ್ಷ ಕೆಎಸ್‍ಆರ್‍ಟಿಸಿಯು ನಾಲ್ಕೂ ವಿಭಾಗಗಳಿಂದ 177 ಕೋಟಿ ನಷ್ಟ ಅನುಭವಿಸಿತ್ತು. ಪರಿಣಾಮ ಒಂದು ಹಂತದಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಲು ಕೂಡ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಸಾರಿಗೆ ಸಚಿವರಾಗಿದ್ದ ರಾಮಲಿಂಗಾರೆಡ್ಡಿ, ತದನಂತರ ಬಂದ ಎಚ್.ಎಂ.ರೇವಣ್ಣ ದರ ಪ್ರಸ್ತಾವನೆಯನ್ನು ಸರ್ಕಾರದ ಮುಂದಿಟ್ಟಿದ್ದರು. ಆದರೆ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ಮಾಡಿದರೆ ಸಾರ್ವಜನಿಕರು ತಿರುಗಿ ಬೀಳಬಹುದೆಂಬ ಭಯದಿಂದ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಕಚೇರಿಯಲ್ಲಿ ಹಾಗೆಯೇ ಇಟ್ಟುಕೊಳ್ಳಲಾಗಿತ್ತು.

ಈಗ ನಾಲ್ಕೂ ಸಂಸ್ಥೆಗಳು ನಷ್ಟ ಅನುಭವಿಸುತ್ತಿರುವುದರಿಂದ ಇದನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ದರ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂದೆ ಇಲಾಖೆ ಅಧಿಕಾರಿಗಳು ಇಟ್ಟಿದ್ದಾರೆಂದು ತಿಳಿದುಬಂದಿದೆ. ದರ ಹೆಚ್ಚಳ ಮಾಡದಿದ್ದರೆ ಸಂಸ್ಥೆಯನ್ನು ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾದರೂ ಅನಿವಾರ್ಯವಾಗಿ ಏರಿಕೆ ಮಾಡಲೇಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದೆ ಬಂದಿದೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾರಿಗೆ ಖಾತೆಯನ್ನು ಹಂಚಿಕೆ ಮಾಡಿದ ನಂತರ ಸಚಿವರು ಹಾಗೂ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಯಾರಿಗೂ ಹೊರೆಯಾಗದಂತೆ, ಸಂಸ್ಥೆಗೆ ನಷ್ಟವಾಗದಂತೆಯೂ ಒಮ್ಮತದ ತೀರ್ಮಾನ ಕೈಗೊಳ್ಳಲಿದ್ದಾರೆ.

ಬಿಎಂಟಿಸಿ ದರದಲ್ಲೂ ಹೆಚ್ಚಳ:

ಇನ್ನು ಕೆಎಸ್‍ಆರ್‍ಟಿಸಿ ಬಸ್ ಪ್ರಯಾಣ ದರದ ಹೆಚ್ಚಳದ ಜತೆಗೆ ಸರ್ಕಾರ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲು ಮುಂದಾಗಿದೆ. ಕಳೆದ ವರ್ಷ ದರವನ್ನು ಹೆಚ್ಚಳ ಮಾಡಬೇಕೆಂಬ ಪ್ರಸ್ತಾವನೆ ಸರ್ಕಾರದ ಮುಂದಿತ್ತಾದರೂ ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿತ್ತು. ಈಗ ಬಿಎಂಟಿಸಿ ದರವನ್ನು ಹೆಚ್ಚಳ ಮಾಡುವಂತೆ ನಿಗಮದ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದಾರೆ.

Sri Raghav

Admin