ಪ್ರೇಮಲತಾ ರೆಡ್ಡಿಗೆ ಸನ್ಮಾನ
ಉಗಾರ ಖುರ್ದ,ಅ.1- ಕೃಷಿ ಇಲ್ಲದ ಬದುಕು ಕಲ್ಪಿಸಲು ಅಸಾಧ್ಯ. ಕೃಷಿ ಪ್ರಧಾನ ಭಾರತದಲ್ಲಿ ಕೃಷಿ ಇಲ್ಲದೆ ಬದುಕುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇಂದು ಕೃಷಿ ಜಮೀನು ನಾಶವಾಗಿ ಉದ್ದಿಮೆಗಳು ಹೆಚ್ಚಾಗುತ್ತಿವೆ. ಇದೇ ರೀತಿ ಮುಂದುವರೆದರೆ ವಿದೇಶಿಗರ ಹಾಗೆ ನಾವು ಕೂಡ ಅಕ್ಕಿ, ಜೋಳ, ಗೋಧಿ ಬದಲು ಬ್ರೆಡ್ ತಿಂದು ಬದುಕುವ ಅಪಾಯ ಎದುರಾಗುವ ಮುನ್ನ ನಾವೆಲ್ಲರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ವಿಜೇತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಪ್ರೇಮಲತಾ ರಡ್ಡಿ ನುಡಿದರು.ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಥಣಿ ತಾಲೂಕಿನ ಐನಾಪೂರ ಗ್ರಾಮದ ಪ್ರಗತಿಪರ ರೈತ ನಾಯಕಿ ಪ್ರೇಮಲತಾರ ಕೃಷಿಯಲ್ಲಿನ ಸಾಧನೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ಶ್ರೇಷ್ಠ ಕೃಷಿ ಮಹಿಳೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು.
ಈ ನಿಟ್ಟಿನಲ್ಲಿ ಐನಾಪೂರದಲ್ಲಿ ನಾಗರಿಕರು ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ರೈತರು ಅತಿಯಾದ ರಾಸಾಯನಿಕ ಗೊಬ್ಬರ ಬಳಸಿ ಜಮೀನುಗಳನ್ನು ಹಾಳು ಮಾಡುತ್ತಿದ್ದಾರೆ, ಅದಕ್ಕಾಗಿ ಕೃಷಿಯಲ್ಲಿ ಅಧುನಿಕತೆಯನ್ನು ಬಳಸಿ ಕೊಂಡು ಕಡಿಮೆ ನೀರು, ಕಡಿಮೆ ರಾಸಾಯನಿಕ ಗೊಬ್ಬರ ಬಳಸಿ ಹೆಚ್ಚು ಇಳುವರಿ ಪಡೆಯುವಂತಾ ಬೆಳೆಗಳನ್ನು ಬೆಳೆದರೆ ರೈತರಿಗೆ ಲಾಭವಾಗಲಿದೆ ಎಂದರು.ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಶಿವಗೌಡ ಪಾರಶೆಟ್ಟಿ ಅವರು ಪ್ರೇಮಲತಾ ಅವರನ್ನು ಸನ್ಮಾನಿಸಿ ಮಾತನಾಡಿದರು.
ಈ ವೇಳೆ ರೈತ ಮುಖಂಡರಾದ ಸುನೀಲ ಪಾಟೀಲ, ಸುರೇಶ ಗಾಣಿಗೇರ, ಲಕ್ಷ್ಮೀಬಾಯಿ ರಡ್ಡಿ, ಕುಮಾರ ಅಪರಾಜ, ವಿನೋದ ಚಲುವಾದಿ, ಡಾ. ಮೋಹನರಾವ್ ಕಾರ್ಚಿ, ಕುಮಾರ ಅಪರಾಜ, ತಮ್ಮಣ್ಣ ಪಾರಶೆಟ್ಟಿ,ಮಹೇಶ ಸೊಲ್ಲಾಪೂರ, ಎಂ.ಎಸ್. ಪಾಟೀಲ, ಪ್ರಕಾಶ ಕೋರ್ಬು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಣ್ಣಾಸಾಹೇಬ ಜಾಧವ, ವಿರುಪಾಕ್ಷಿ ಡೂಗನವರ, ಧರೆಪ್ಪ ಅಕಿವಾಟೆ, ಬಸವರಾಜ ಜಿರಗಾಳೆ, ಮೃತ್ಯುಂಜಯ ಹಿರೇಮಠ, ಸುರೇಶ ಕುಡವಕ್ಕಲಗಿ, ಭರತೇಶ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.