ಪ್ಲಾಸ್ಟಿಕ್ ನಿಷೇಧ ಕಟ್ಟುನಿಟ್ಟು ಜಾರಿಗೆ ಸಂಪುಟ ಸಭೆಯಲ್ಲಿ ನಿರ್ಧಾರ
ಬೆಂಗಳೂರು, ಅ.26- ರಾಜ್ಯದಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ನಿಷೇಧ ಜಾರಿಗೆ ಸಂಬಂಧಿಸಿದಂತೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳನ್ನು ಅನುಷ್ಟಾನಾಧಿಕಾರಿಗಳಾಗಿ ಸೇರ್ಪಡೆ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಪ್ಲಾಸ್ಟಿಕ್ ಬಳಕೆ, ಉತ್ಪಾದನೆ, ಸಾಗಾಟವನ್ನು ನಿಷೇಧಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಸ್ಥಳೀಯ ಆಡಳಿತ ಈ ಆದೇಶ ಜಾರಿ ಹೊಣೆಯನ್ನು ಹೊರಬೇಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ರೈತರಿಂದ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಖರೀದಿಸಲು ಉನ್ನತಾಧಿಕಾರಸ್ಥ ಸಮಿತಿಯು ಮಾಡಿರುವ ಶಿಫಾರಸಿನ ಐದು ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಕರ್ನಾಟಕದ ಕೆಲವು ಸ್ಥಳಗಳ ಹೆಸರನ್ನು ಬದಲಾಯಿಸುವ ವಿಧೇಯಕ 2014ಕ್ಕೆ ಅನುಮೋದನೆ ನೀಡಲಾಗಿದೆ. ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಲ್ಲುಕೋಟೆ ಗ್ರಾಮದಲ್ಲಿ ಖಾಸಗಿ ಸಂಘ-ಸಂಸ್ಥೆಗಳಿಗೆ ಶೈಕ್ಷಣಿಕ ಅಥವಾ ಸಾಮಾಜಿಕ ಉದ್ದೇಶಕ್ಕೆ ಗುತ್ತಿಗೆ ಆಧಾರದಲ್ಲಿ ನೀಡಿರುವ 12.12 ಎಕರೆ ಜಮೀನನ್ನು ಗುತ್ತಿಗೆ ಬದಲು ಮಂಜೂರು ಮಾಡಲು ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಲಬುರಗಿಯ ಕ್ಯಾನ್ಸರ್ ಕೇಂದ್ರವನ್ನು ಎರಡನೆ ಹಂತದಲ್ಲಿ 47.69 ಕೋಟಿ ರೂ.ಗಳ ಅನಾವರ್ತಕ ವೆಚ್ಚ ಹಾಗೂ 11.84 ಕೋಟಿ ರೂ.ಗಳ ಆವರ್ತಕ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಗಿದೆ ಎಂದು ತಿಳಿದುಬಂದಿದೆ.ಚಾಮರಾಜನಗರ ತಾಲೂಕು ಹರವೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಸಂಕೀರ್ಣವನ್ನು 13.91 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲು ಅನುಮೋದನೆ ನೀಡಲಾಗಿದೆ.ಕರ್ನಾಟಕ ಭಾರತ ಸ್ಕೌಟ್ ಮತ್ತು ಗೈಡ್ಸ್ಗೆ ಒಂದು ಬಾರಿಗೆ 10 ಕೋಟಿ ರೂ. ಸಹಾಯ ಧನ ನೀಡಿರುವ ಗ್ರಾಮಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.