ಫುಟ್ಬೋರ್ಡ್ ಬಿಟ್ಟು ಮೇಲೆ ಬಾ ಅಂದಿದ್ದಕ್ಕೆ ಮಹಿಳಾ ಕಂಡಕ್ಟರ್ ಜೊತೆ ಫೈಟಿಗಿಳಿದ ವಿದ್ಯಾರ್ಥಿ
ಬೆಂಗಳೂರು,ಸೆ.29-ಬಿಎಂಟಿಸಿ ಬಸ್ವೊಂದರ ಮಹಿಳಾ ಕಂಡಕ್ಟರ್ ಹಾಗೂ ವಿದ್ಯಾರ್ಥಿ ನಡುವೆ ಜಗಳವಾಗಿ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ. ಬಿಎಂಟಿಸಿ 9ನೇ ಡಿಪೋ ಕಂಡಕ್ಟರ್ ಅರುಣ ಎಂಬುವರು ಇಂದು ಬೆಳಗ್ಗೆ ಪೀಣ್ಯದಿಂದ ಯಲಹಂಕ ಬಸ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಸ್ 8.30ರಲ್ಲಿ ಕಮ್ಮಗೊಂಡನಹಳ್ಳಿ ಬಸ್ ನಿಲ್ದಾಣಕ್ಕೆ ಬಂದಾಗ ವಿದ್ಯಾರ್ಥಿ ಪುನೀತ್ ಎಂಬಾತ ಫುಟ್ಬೋರ್ಡ್ ಮೇಲೆ ನಿಂತಿದ್ದನು. ಈ ವೇಳೆ ಕಂಡಕ್ಟರ್ ಅರುಣ ಮೇಲೆ ಬರುವಂತೆ ಸೂಚಿಸಿದಾಗ ಇವರಿಬ್ಬರ ನಡುವೆ ಜಗಳವಾಗಿದೆ. ಅರುಣಾ ಅವರು ಪುನೀತ್ನ ಪಾಸ್ ಪಡೆದುಕೊಂಡು ಜೇಬಿನಲ್ಲಿಟ್ಟುಕೊಂಡಿದ್ದಾರೆ. ಪುನೀತ್ ಪಾಸ್ ಹಿಂದಿರುಗಿಸುವಂತೆ ಕೇಳಿದಾಗ ಅದನ್ನು ಡಿಪೋಗೆ ಕೊಡುತ್ತೇನೆ. ಅಲ್ಲಿ ಪಡೆದುಕೊಳ್ಳುವಂತೆ ಅರುಣಾ ಅವರು ತಿಳಿಸಿದಾಗ, ಇವರಿಬ್ಬರ ಮಧ್ಯೆ ಜಗಳ ನಡೆದು ತಳ್ಳು ನೂಕಾಟವಾಗಿದೆ. ಈ ವೇಳೆ ಪುನೀತನ ಸ್ನೇಹಿತರಾದ ಗುರುಪ್ರವೀಣ್ ಮತ್ತು ಪವನ್ ಬಂದು ಇವರನ್ನು ಬಿಡಿಸಲು ಯತ್ನಿಸಿದಾಗ ಇವರಿಬ್ಬರ ಕೈಯನ್ನು ಅರುಣಾ ಅವರು ಕಚ್ಚಿದ್ದಾರೆ.
ಈ ವೇಳೆ ಸ್ಥಳೀಯರು ಗಂಗಮ್ಮನಗುಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಂಡಕ್ಟರ್ ಅರುಣಾರವರು, ಈ ವಿದ್ಯಾರ್ಥಿಗಳು ನಾನು ಕರ್ತವ್ಯದಲ್ಲಿದ್ದಾಗ ನನ್ನನ್ನು ನೂಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಇತ್ತ ಪುನೀತ್ ಸಹ ಕಂಡಕ್ಟರ್ರವರು ನನ್ನ ಕೊರಳಪಟ್ಟಿ ಹಿಡಿದು ಎಳೆದಾಡಿದರಲ್ಲದೆ ನನ್ನ ಸ್ನೇಹಿತರ ಕೈ ಕಚ್ಚಿದ್ದಾರೆ ಎಂದು ಪ್ರತಿದೂರು ನೀಡಿದ್ದಾನೆ. ಇಬ್ಬರ ದೂರುಗಳನ್ನು ದಾಖಲಿಸಿಕೊಂಡಿರುವ ಗಂಗಮ್ಮನಗುಡಿ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.