ಫೆ.8ರ ನಂತರ ನ್ಯಾ.ಕರ್ಣನ್‍ ನೀಡಿದ್ದ ಎಲ್ಲಾ ತೀರ್ಪು ರದ್ದು, ವೈದ್ಯಕೀಯ ಪರೀಕ್ಷೆ : ಸುಪ್ರೀಂ ಆದೇಶ

Karnana

ನವದೆಹಲಿ, ಮೇ 1-ನ್ಯಾಯಾಂಗ ನಿಂದನೆಗೆ ಗುರಿಯಾಗಿರುವ ಹಾಗೂ ಪ್ರಚೋದನಕಾರಿ ಹೇಳಿಕೆಗಳ ಮೂಲಕ ಸದಾ ಒಂದಿಲ್ಲೊಂದು ವಿವಾದದ ಸುಳಿಗೆ ಸಿಲುಕಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು ಮಾರ್ಚ್ 4 ರಂದು ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ. ನ್ಯಾಯಮೂರ್ತಿ ಒಬ್ಬರಿಗೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿರುವುದು ಭಾರತದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು.  ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ನ್ಯಾಯಾಂಗ ನಿಂದನೆಗೊಳಗಾಗಿರುವ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್.ಕರ್ಣನ್ ಅವರು ಫೆ.8 ರಿಂದ ಈಚೆಗೆ ನೀಡಿರುವ ಯಾವುದೇ ಆದೇಶಗಳನ್ನು ಮಾನ್ಯ ಮಾಡದಂತೆ ಸರ್ವೋಚ್ಚ ನ್ಯಾಯಾಲಯವು ದೇಶದ ಎಲ್ಲಾ ಕೋರ್ಟ್‍ಗಳಿಗೆ ಹಾಗೂ ನ್ಯಾಯಾಧಿಕರಣಗಳಿಗೆ ನಿರ್ದೇಶನ ನೀಡಿದೆ.ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ 7 ಸದಸ್ಯರ ಪೀಠವು ಕೋಲ್ಕತ್ತಾದ ಸರ್ಕಾರಿ ಆಸ್ಪತ್ರೆಯೊಂದರಿಂದ ನೇಮಿಸಲ್ಪಡುವ ವೈದ್ಯರುಗಳ ಮಂಡಳಿ ಮೂಲಕ ನ್ಯಾಯಮೂರ್ತಿ ಕರ್ಣನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ನಿರ್ದೇಶನ ನೀಡಿದೆ.  ನ್ಯಾ.ಕರ್ಣನ್ ಅವರಿಗೆ ಮೇ 4 ರಂದು ವೈದ್ಯಕೀಯ ಪರೀಕ್ಷೆ ನಡೆಸಲು ವೈದ್ಯರಿಗೆ ನೆರವಾಗಲು ಪೊಲೀಸ್ ಅಧಿಕಾರಿಗಳ ತಂಡವನ್ನು ರಚಿಸುವಂತೆ ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರಿಗೆ ಪೀಠವು ಸೂಚನೆ ಕೊಟ್ಟಿದೆ.

ನ್ಯಾಯಮೂರ್ತಿ ಕರ್ಣನ್ ಅವರು ಆಡಳಿತಾತ್ಮಕ ಮತ್ತು ನ್ಯಾಯಾಂಗ ಅಧಿಕಾರ ಚಲಾವಣೆಯಿಂದ ನಿರ್ಬಂಧಿಸುವ ತನ್ನ ಹಿಂದಿನ ಆದೇಶವನ್ನು ಮತ್ತೆ ಉಲ್ಲೇಖಿಸಿದ ಪೀಠವು ಫೆ.8ರ ನಂತರ ನ್ಯಾಯಮೂರ್ತಿಯವರು ಹೊರಡಿಸಿದ ಆದೇಶಗಳನ್ನು ಪರಿಗಣಿಸಬಾರದು ಎಂದು ಎಲ್ಲಾ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಮತ್ತು ಆಯೋಗಗಳಿಗೆ ಸ್ಪಷ್ಟ ಸೂಚನೆ ನೀಡಿದೆ.
ನಿಂದನೆ ನೋಟೀಸ್‍ಗೆ ತಮ್ಮ ಪ್ರತ್ಯುತ್ತರ ನೀಡುವಂತೆ ಕರ್ಣನ್ ಅವರಿಗೆ ಸೂಚಿಸಿದ ನ್ಯಾಯಾಲಯವು, ಮೇ 8ರ ವೇಳೆಗೆ ಈ ಬಗ್ಗೆ ಸ್ಪಷ್ಟ ಉತ್ತರ ಬಾರದಿದ್ದರೆ, ಈ ಬಗ್ಗೆ ತಾವು(ಕರ್ಣನ್) ಹೇಳುವುದು ಏನೂ ಇಲ್ಲ ಎಂದು ನ್ಯಾಯಾಲಯ ಭಾವಿಸುವುದಾಗಿ ತಿಳಿಸಿದೆ.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಜೆ.ಚಾಲಮೇಶ್ವರ್,ರಂಜನ್ ಗೊಗೊಯ್,ಎಂ.ಬಿ.ಲೋಕೂರ್, ಪಿ.ಸಿ.ಘೋಷ್ ಮತ್ತು ಕುರಿಯನ್ ಜೋಸೆಫ್ ಅವರನ್ನೊಳಗೊಂಡ ಪೀಠವು ಮೇ 8 ಅಥವಾ ಅದಕ್ಕಿಂತ ಮುಂಚೆ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ಕೋರಿದೆ.  ಅವರ ವಿರುದ್ಧದ ನ್ಯಾಯಾಂಗ ಅರ್ಜಿ ವಿಚಾರಣೆಯನ್ನು ಅದರ ಮರುದಿನಕ್ಕೆ (ಮೇ 9) ನಿಗದಿಗೊಳಿಸಿದೆ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin