ಫೇಸ್ಬುಕ್ನಲ್ಲಿ ಮಗಳಿಗೆ ಕಾಮೆಂಟ್ ಮಾಡಿದ ಯುವಕನ ಮೇಲೆ ಬಿಜೆಪಿ ಶಾಸಕ ‘ಕಾಗೆ’ ಬೆಂಬಲಿಗರಿಂದ ಹಲ್ಲೆ
ಬೆಳಗಾವಿ, ಜ.9- ತಮ್ಮ ಪುತ್ರಿಗೆ ಫೇಸ್ಬುಕ್ನಲ್ಲಿ ಸಂದೇಶ ಕಳುಹಿಸಿದ ಆರೋಪದ ಮೇಲೆ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಅವರ ಬೆಂಬಲಿಗರು ಯುವಕ ಹಾಗೂ ಆತನ ತಾಯಿಯನ್ನು ಮನೆಯಿಂದ ಎಳೆದೊಯ್ದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಗಾರಖುರ್ದದ ವಾಸಿ ವಿವೇಕ್ಶೆಟ್ಟಿ ಮತ್ತು ಆತನ ತಾಯಿ ಉಜ್ವಲ ಶೆಟ್ಟಿ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದು, ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ.1ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಶಾಸಕ ರಾಜುಕಾಗೆ ಅವರ ಸೋದರ ಹಾಗೂ ಬೆಂಬಲಿಗರು ದೊಣ್ಣೆ, ಕುಡುಗೋಲು ಹಿಡಿದು ಯುವಕನ ಮನೆಗೆ ನುಗ್ಗಿ ಆತನನ್ನು ಕೈ-ಕಾಲು ಹಿಡಿದು ಎಳೆದೊಯ್ದಿದ್ದಾರೆ. ಹಿಂದೆಯೇ ತಾಯಿಯನ್ನು ಕರೆದೊಯ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ತಾಯಿ, ಮಗ ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕನ ಮನೆ ಬಳಿ ಇದ್ದ ಸಿಸಿ ಟಿವಿಯಲ್ಲಿ ತಾಯಿ-ಮಗನನ್ನು ಎಳೆದೊಯ್ದಿರುವ ದೃಶ್ಯ ಸೆರೆಯಾಗಿದೆ. ತಮಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸರಿಗೆ ದೂರು ನೀಡಲು ಆಗುತ್ತಿಲ್ಲ ಎಂದು ಗಾಯಗೊಂಡಿರುವ ಯುವಕ ಹೇಳಿಕೊಂಡಿದ್ದಾನೆ.
ನನಗೆ ಮಹಿತಿಯೇ ಇಲ್ಲ:
ಯುವಕ ಹಾಗೂ ಆತನ ತಾಯಿ ಮೇಲೆ ಹಲ್ಲೆ ನಡೆದಿರುವ ಘಟನೆ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎಂದು ಬಿಜೆಪಿ ಶಾಸಕ ರಾಜುಕಾಗೆ ಹೇಳಿದ್ದಾರೆ. ಘಟನೆ ಕುರಿತು ಮಾಧ್ಯಮಗಳಲ್ಲಿ ವರದಿ ಬಂದ ನಂತರ ಪ್ರತಿಕ್ರಿಯಿಸಿರುವ ಶಾಸಕರು, ನನಗೆ ವಿವೇಕ್ಶೆಟ್ಟಿ ಗೊತ್ತು. ಆದರೆ, ನಾನು ಹಲ್ಲೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ನನ್ನ ಮಗಳ ಫೇಸ್ಬುಕ್ ಬಗ್ಗೆಯೂ ಗೊತ್ತಿಲ್ಲ. ನನ್ನ ಸೋದರ ಏನು ಮಾಡಿದ್ದಾನೆ ಎಂಬ ಮಾಹಿತಿಯೂ ನನಗಿಲ್ಲ . ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಲು ಸಾಧ್ಯಾನಾ ಎಂದು ಶಾಸಕರು ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ದ್ವೇಷದಲ್ಲಿ ಹಲ್ಲೆ:
ರಾಜಕೀಯ ದ್ವೇಷದಲ್ಲಿ ಶಾಸಕ ರಾಜುಕಾಗೆ ಅವರ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿವೇಕ್ ಆರೋಪಿಸಿದ್ದಾರೆ. ನಾನು ಯುವ ಕಾಂಗ್ರೆಸ್ ಘಟಕದಲ್ಲಿ ಸಕ್ರಿಯನಾಗಿದ್ದೇನೆ. ನನ್ನ ಏಳಿಗೆ ಸಹಿಸದೆ ಫೇಸ್ಬುಕ್ಗೆ ಸಂದೇಶ ಕಳುಹಿಸಿರುವುದಾಗಿ ಸುಳ್ಳು ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ. ಶಾಸಕರ ಇನೋವಾಕಾರ್ನಲ್ಲಿ ಬಂದವರು ಎಳೆದೊಯ್ದು ಹಲ್ಲೆ ನಡೆಸಿದರು. ಶಾಸಕ ರಾಜುಕಾಗೆ ಗೋದಾಮಿಗೆ ಎಳೆದೊಯ್ದು ಹಲ್ಲೆ ನಡೆಸಿದರು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೊಲೀಸರ ಭೇಟಿ:
ಹಲ್ಲೆ ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಗವಾಡ ಠಾಣೆ ಪಿಎಸ್ಐ ಆನಂದ್ ಡೋಣೆ ಅವರು ಮೀರಜ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.