ಫ್ಲೈಟ್’ನಲ್ಲೆ ದಂಪತಿ ಫೈಟ್, ಪ್ರಯಾಣಿಕರ ಹೊಡೆದಾಟ, ತುರ್ತು ಭೂಸ್ಪರ್ಶ ಮಾಡಿದ ವಿಮಾನ (Video)
ಲಂಡನ್, ಜ.17-ಲೆಬನಾನ್ ರಾಜಧಾನಿ ಬೈರೂತ್ನಿಂದ ಲಂಡನ್ಗೆ ತೆರಳಲು 30,000 ಅಡಿಗಳ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ದಂಪತಿ ನಡುವೆ ನಡೆಯುತ್ತಿದ್ದ ಜಗಳ ವಿಕೋಪಕ್ಕೆ ತಿರುಗಿ ಪ್ರಯಾಣಿಕರ ನಡುವೆ ಹೊಡೆದಾಟ ನಡೆದ ಹಿನ್ನೆಲೆಯಲ್ಲಿ ಪೈಲೆಟ್ ಟರ್ಕಿಯ ಇಸ್ತಾನ್ಬುಲ್ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿದ ಘಟನೆ ನಡೆದಿದೆ.
ಮಿಡ್ಲ್ಈಸ್ಟ್ ಏರ್ಲೈನ್ಸ್ ಸಂಸ್ಥೆಗೆ ಸೇರಿದ ವಿಮಾನದಲ್ಲಿ ನಿನ್ನೆ ಹಿರಿಯ ಪ್ರಯಾಣಿಕನೊಬ್ಬ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದನ್ನು ತಡೆಯಲು ಮಧ್ಯಪ್ರವೇಶಿಸಿದ ಸಹ ಪ್ರಯಾಣಿಕನನನ್ನು ಆತ ಥಳಿಸಿದ. ಇವರಿಬ್ಬರ ಹೊಡೆದಾಟ ನಿಲ್ಲಿಸಲು ಬಂದ ಕ್ಯಾಬಿನ್ ಸಿಬ್ಬಂದಿಯಲ್ಲಿ ಒಬ್ಬನ ಮೇಲೂ ಆ ವೃದ್ಧ ಹಲ್ಲೆ ಮಾಡಿದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
Fist fight erupts on passenger jet at 30,000ft after air hostess is assaulted on packed London-bound flight https://t.co/U4tq6OQyVk
— Watch News (@BY_football) January 13, 2017
ನಂತರ ತಣ್ಣಗಾದ ಆತ ಶೌಚಾಲಯದತ್ತ ತೆರಳುವಾಗ ಗಗನಸಖಿ ಆಕಸ್ಮಿಕವಾಗಿ ಅಡ್ಡಬಂದಾಗ ಆಕೆಯನ್ನು ನಿಂದಿಸಿ ಹೊಡೆಯಲು ಮುಂದಾದ. ಈತನಿಂದ ಮೊದಲು ಪೆಟ್ಟು ತಿಂದ ಪ್ರಯಾಣಿಕ ವೃದ್ದನ ಮೇಲೆ ಮತ್ತೆ ಮುಗಿಬಿದ್ದಾಗ ಇವರಿಬ್ಬರ ನಡುವೆ ಮಾರಾಮಾರಿ ನಡೆಯಿತು. ಕ್ಯಾಬಿನ್ ಸಿಬ್ಬಂದಿ ಜಗಳ ಬಿಡಿಸಿ ಇವರಿಬ್ಬರನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿದರು.
ಈ ಘಟನೆಯಿಂದ ಆತಂಕಗೊಂಡ ಪೈಲೆಟ್ ಮುಂಜಾಗ್ರತಾ ಕ್ರಮವಾಗಿ ವಿಮಾನವನ್ನು ಟರ್ಕಿಯ ಇಸ್ತಾಂಬುಲ್ನಲ್ಲಿ ಇಳಿಸಿದ. ನಂತರ ಆ ಹಿರಿಯ ಪ್ರಯಾಣಿಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.