ಬಂದ್‍ ಗೆ 1100ಕ್ಕೂ ಸಂಘಟನೆಗಳ ಬೆಂಬಲ : ನಾಳೆ ಸ್ತಬ್ಧವಾಗಲಿದೆ ಕರ್ನಾಟಕ

Karnataka-bandh-01

ಬೆಂಗಳೂರು, ಸೆ.8-ಕಾವೇರಿ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದನ್ನು ವಿರೋಧಿಸಿ ನಾಳೆ ನಡೆಯಲಿರುವ ಬಂದ್‍ಗೆ ಕನ್ನಡ ಚಲನಚಿತ್ರೋದ್ಯಮ, ಖಾಸಗಿ ಸಾರಿಗೆ ಸಂಸ್ಥೆಗಳು ಸೇರಿದಂತೆ ಸಾವಿರಕ್ಕೂ ಹೆಚ್ಚು ಸಂಘಟನೆಗಳು ವ್ಯಾಪಕ ಬೆಂಬಲ ಘೋಷಿಸಿದ್ದು, ಇಡೀ ರಾಜ್ಯದಲ್ಲಿ ಸಾರ್ವಜನಿಕ ಜೀವನ ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ.
ಬಂದ್‍ಗೆ ಬೆಂಬಲ ಸೂಚಿಸಿರುವ ಕನ್ನಡ ಪರ ಮತ್ತಿತರ ಸಂಘಟನೆಗಳ ಸಂಖ್ಯೆ 1100ಕ್ಕೂ ಹೆಚ್ಚಿದೆ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ನಾವು ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕೆಂದು ಮನವಿ ಮಾಡಿದ್ದೇವೆ ಎಂದು ವಾಟಾಳ್ ಹೇಳಿದರು.

ರಾಜ್ಯಸಾರಿಗೆ ನಿಗಮದ ಸಂಘಟನೆಗಳು, ಆಟೋರಿಕ್ಷಾ ಚಾಲಕರು ಮತ್ತು ಟ್ಯಾಕ್ಸಿ ಚಾಲಕರು ಕರ್ನಾಟಕ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿದ್ದು, ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸದ್ಯಕ್ಕೆ ಮಂಡ್ಯ ಜಿಲ್ಲೆ ಹೊರತುಪಡಿಸಿ ಈವರೆಗೂ ಎಲ್ಲಿಯೂ ಅಧಿಕೃತವಾಗಿ ರಜೆ ಘೋಷಿಸಿಲ್ಲ. ಆಯಾ ಜಿಲ್ಲೆಯ ಪರಿಸ್ಥಿತಿಗನುಗುಣವಾಗಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ಕೊಟ್ಟಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಬಂದ್ ವೇಳೆ ಸಹನೆ ಕಳೆದುಕೊಳ್ಳದೆ ಶಾಂತರೀತಿಯಿಂದ ವರ್ತಿಸಬೇಕು. ಸಾರ್ವಜನಿಕ ಆಸ್ತಿ-ಪಾಸ್ತಿ ಹಾಳು ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಇನ್ನು ಪ್ರತಿಪಕ್ಷ ಬಿಜೆಪಿ ಕೂಡ ಬಂದ್‍ಗೆ ಬೆಂಬಲ ಸೂಚಿಸಿದ್ದು, ಜೆಡಿಎಸ್ ಕೂಡ ಸಾಥ್ ನೀಡುವ ಸಾಧ್ಯತೆ ಇದೆ.
ಮುನ್ನೆಚ್ಚರಿಕೆ ಕ್ರಮವಾಗಿ ರಾಜಧಾನಿ ಬೆಂಗಳೂರು, ಕಾವೇರಿ ಕೊಳ್ಳ ತೀರ ಪ್ರದೇಶಗಳಾದ ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಮತ್ತಿತರ ಕಡೆ ಭಾರೀ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಸುಪ್ರೀಂ ಕೋರ್ಟ್ ತೀರ್ಪು ಒಪ್ಪುವುದಿಲ್ಲ, ತಮಿಳುನಾಡಿಗೆ ನೀರು ಬಿಡುವುದಿಲ್ಲ, ನ್ಯಾಯಾಂಗ ನಿಂದನೆ ಎದುರಿಸಲು ಸಿದ್ಧ, ಜೈಲಿಗೆ ಹೋಗಲು ಹೆದರುವುದಿಲ್ಲ ಎಂಬ ದಿಟ್ಟ ಘೋಷಣೆಯೊಂದಿಗೆ ಸಾಂಕೇತಿಕವಾಗಿ ಬಂದ್‍ಗೆ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಒಕ್ಕೂಟ ಕರೆ ನೀಡಿದ್ದರೂ, ಇದೊಂದು ಸಮಸ್ತ ಕನ್ನಡಿಗರ ಮತ್ತು ಅಖಂಡ ಕರ್ನಾಟಕದ ಹೋರಾಟ ಎಂಬ ನೆಲೆಯಲ್ಲಿ ವಿವಿಧ ಸಂಘಟನೆಗಳು ಬಂದ್‍ಗೆ ಸಂಪೂರ್ಣ ಬೆಂಬಲ ಸೂಚಿಸಿವೆ. ಹೀಗಾಗಿ ನಾಳೆ ಇಡೀ ರಾಜ್ಯ ಸ್ತಬ್ಧವಾಗಲಿದೆ. ಬೆಂಗಳೂರು ಮತ್ತು ಮೈಸೂರು ಭಾಗಕ್ಕೆ ಬಂದ್ ಬಿಸಿ ಜೋರಾಗಿ ತಟ್ಟಲಿದೆ. ಉತ್ತರ ಕರ್ನಾಟಕ ಭಾಗಕ್ಕಿಂತ ಬೆಂಗಳೂರು, ಮೈಸೂರು ಭಾಗದಲ್ಲಿ ಬಂದ್ ತೀವ್ರತೆ ಹೆಚ್ಚಾಗಿರಲಿದೆ ಎಂಬುದು ಗುಪ್ತಚರ ವಿಭಾಗದ ಮಾಹಿತಿ. ಕನ್ನಡ ಒಕ್ಕೂಟ ಸಂಪೂರ್ಣ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದು, ಪ್ರತಿಯೊಬ್ಬರೂ ಬಂದ್‍ಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.

ಕೆಎಸ್‍ಆರ್‍ಟಿಸಿ, ಬಿಎಂಟಿಸಿ ನೌಕರರ ಸಂಘಗಳು, ಖಾಸಗಿ ಬಸ್ ಮಾಲೀಕರ ಸಂಘ, ವಾಣಿಜ್ಯ ಸಂಘಟನೆಗಳು, ಚಲನ ಚಿತ್ರೋದ್ಯಮ, ಲಾರಿ ಮಾಲೀಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ, ಆಟೋ ಚಾಲಕರ ಸಂಘ, ಹೋಟೆಲ್ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳ ಸಂಘ ಸೇರಿ ನೂರಾರು ಸಂಘಟನೆಗಳು ಬಂದ್‍ನಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವ್ಯಾಪಾರ-ವಹಿವಾಟು ಸ್ಥಗಿತಗೊಳ್ಳಲಿದೆ.  ಮಾಲ್‍ಗಳು, ಚಿತ್ರಮಂದಿರಗಳಿಗೆ ಬೀಗ ಬೀಳಲಿದೆ. ಅಂಗಡಿ- ಮುಂಗಟ್ಟುಗಳು ಬಂದ್ ಆಗಲಿವೆ. ಶಾಲಾ-ಕಾಲೇಜುಗಳಿಗೆ ರಜೆ ಸಿಗಲಿದೆ. ಸರ್ಕಾರಿ ಕಚೇರಿಗಳು, ಕೋರ್ಟ್ ಕಲಾಪಗಳು, ಖಾಸಗಿ ಕಂಪನಿಗಳು, ಐಟಿ ಕಂಪನಿಗಳ ಕಾರ್ಯ ಸ್ಥಗಿತಗೊಳ್ಳಲಿದೆ.

ಬೆಂಗಳೂರು ಟೂರಿಸ್ಟ್ ಟ್ಯಾಕ್ಸಿ ಮಾಲೀಕರ ಸಂಘದ ರಾಧಾಕೃಷ್ಣ ಹೊಳ್ಳ, 60000 ಟ್ಯಾಕ್ಸಿ ಚಾಲಕರು ನಾಳೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಕೆಂಪೇಗೌಡ ವಿಮಾನಿಲ್ದಾಣಕ್ಕೆ ಯಾವುದೇ ಕ್ಯಾಬ್‍ಗಳು ಸಂಚರಿಸುವುದಿಲ್ಲ. ನಾಳೆ ಎಲ್ಲಾ ಚಿತ್ರೀಕರಣಗಳನ್ನು ಬೆಳಿಗ್ಗೆಯಿಂದ ಸಂಜೆವರೆಗೆ ಬಂದ್ ಮಾಡಲಾಗುತ್ತದೆ.  ನಾಳೆ ಬಂದ್ ಇರುವುದರಿಂದ ಸೆ. 9ರಂದು ನಡೆಯಬೇಕಿದ್ದ ಕಾಮೆಡ್ ಕೆ ಕೌನ್ಸಿಲಿಂಗ್ ಸೆ.10ಕ್ಕೆ ಮುಂದೂಡಲಾಗಿದೆ.ರೈತರ ಪ್ರತಿಭಟನೆಗಳಿಂದ ಬೆಂಗಳೂರಿನಿಂದ ಮೈಸೂರಿನ ಕೆಎಸ್‍ಆರ್‍ಟಿಸಿ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಮಂಡ್ಯದ ಪರಿಸ್ಥಿತಿಯನ್ನು ಅವಲಂಬಿಸಿ ಬಸ್ ಸಂಚಾರ ಆರಂಭಿಸುವುದಾಗಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ ನಾಳೆ ಅಂಗಡಿ, ಹೊಟೇಲï, ಪೆಟ್ರೋಲ್ ಬಂಕ್ ಬಾಗಿಲು ಮುಚ್ಚುವ ಸಾಧ್ಯತೆ ಇದೆ. ಮಂಡ್ಯ, ಮೈಸೂರು, ರಾಮನಗರ, ಶ್ರೀರಂಗಪಟ್ಟಣ, ಮದ್ದೂರು ಮುಂತಾದ ಕಡೆ ಬಂದ್ ಬಿಸಿ ಜೋರಾಗಿ ತಟ್ಟಲಿದೆ. ಶಾಲಾ-ಕಾಲೇಜು ಮತ್ತು ವ್ಯಾಪಾರಿ ಮಳಿಗೆಗಳು ಒಂದು ದಿನದ ಮಟ್ಟಿಗೆ ಬಾಗಿಲು ಮುಚ್ಚಲಿವೆ.
ನಾಳೆ ಬೆಂಗಳೂರಿನಿಂದ ಯಾವುದೇ ವಾಹನಗಳು ತಮಿಳುನಾಡಿಗೆ ತೆರಳುವುದಿಲ್ಲ ಮತ್ತು ಅಲ್ಲಿಂದ ಯಾವುದೇ ವಾಹನಗಳು ಬೆಂಗಳೂರಿಗೆ ಆಗಮಿಸುವುದಿಲ್ಲ. ಕೆಎಸ್‍ಆರ್‍ಟಿಸಿಯು ತಮಿಳುನಾಡಿಗೆ ಬಸ್ ಸೇವೆಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ಪ್ರತಿದಿನ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಿಂದ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಕರೆ ನೀಡಲಾಗಿರುವ ಕರ್ನಾಟಕ ಬಂದ್‍ಗೆ ಎಲ್ಲ ಕನ್ನಡಪರ, ರೈತ ಹಾಗೂ ಕಾರ್ಮಿಕ ಸಂಘಟನೆಗಳು, ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ವಕೀಲರ ಸಂಘ, ಪ್ರಮುಖ ರಾಜಕೀಯ ಪಕ್ಷ ಬಿಜೆಪಿ ಸೇರಿದಂತೆ ಬಹುತೇಕ ಎಲ್ಲಾ ಸಂಘಟನೆಗಳು ಸಂಪೂರ್ಣ ಬೆಂಬಲ ಸೂಚಿಸಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗಳನ್ನು ಹಮ್ಮಿಕೊಳ್ಳಲಿದೆ.

ಸಾರಿಗೆ ನೌಕರರಿಂದ ಬೆಂಬಲ:
ತಮಿಳುನಾಡಿಗೆ ಕಾವೇರಿ ನದಿಯಿಂದ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ನಾಳೆ ನಡೆಯಲಿರುವ ಕರ್ನಾಟಕ ಬಂದ್‍ಗೆ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಆ ದಿನ ರಾಜ್ಯಾದಂತ ಬಸ್ ಸಂಚಾರ ಇರುವುದಿಲ್ಲ.

ವಕೀಲರ ಸಂಘದಿಂದ ಬೆಂಬಲ:
ಕಾವೇರಿ ನದಿಯಿಂದ 10 ದಿನಗಳ ಕಾಲ 15 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಖಂಡಿಸಿ ನಾಳೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಬೆಂಗಳೂರು ವಕೀಲರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಜೊತೆಗೆ ಎಲ್ಲಾ ಜಿಲ್ಲಾ ಮತ್ತು ತಾಲೂಕು ವಕೀಲರ ಸಂಘಗಳಿಗೂ ಬಂದ್‍ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಗಿದೆ.

► Follow us on –  Facebook / Twitter  / Google+

Sri Raghav

Admin