ಬಗೆಹರಿಯದ ನೋಟು ರದ್ದತಿ ವಿವಾದ : ರಾಜಕೀಯ ಪಕ್ಷಗಳ ಚೆಲ್ಲಾಟ, ಜನರಿಗೆ ಪ್ರಾಣಸಂಕಟ

Notes

ಬೆಂಗಳೂರು, ನ.27- ಐದುನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರು ವುದರಿಂದ ಜನಸಾಮಾನ್ಯರಿಗಾಗಿರುವ ತೀವ್ರ ತೊಂದರೆಯ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕರೆ ಕೊಟ್ಟಿರುವ ನಾಳಿನ ಆಕ್ರೋಶ್ ದಿವಸ್ ಪ್ರತಿಭಟನೆಯಿಂದ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.  ಬಸ್, ಲಾರಿಗಳು ಎಂದಿನಂತೆ ಓಡಾಡಲಿವೆ. ಪರಿಸ್ಥಿತಿ ಕೈ ಮೀರಿದರೆ ಮಾತ್ರ ರಾಜ್ಯ ರಸ್ತೆ ಸಾರಿಗೆ ಮತ್ತು ಬಿಎಂಟಿಸಿ ಬಸ್‍ಗಳ ಸೇವೆ ಸ್ಥಗಿತಗೊಳಿಸಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಾರಿಗಳ ಮಾಲೀಕರು ನಾಳಿನ ಪ್ರತಿಭಟನೆಗೆ ಬೆಂಬಲ ನೀಡಿಲ್ಲ. ಅದೇ ರೀತಿ ಟೆಂಪೋ, ಗೂಡ್ಸ್, ಮಿನಿ ಟೆಂಪೋ, ಮಿನಿ ಗೂಡ್ಸ್ ಟ್ರಕ್‍ಗಳವರು, ಟ್ಯಾಕ್ಸಿಗಳವರು ಪ್ರತಿಭಟನೆಯಿಂದ ದೂರ ಉಳಿದಿದ್ದಾರೆ. ವಿವಿಧ ಸಂಘಟನೆಗಳು ಸೇರಿದಂತೆ ಅನೇಕರು ಪ್ರತಿಭಟನೆಗೆ ಸಾಥ್ ನೀಡಿಲ್ಲ. ಆದರೆ, ಕಾಂಗ್ರೆಸ್, ಕಮ್ಯುನಿಸ್ಟ್, ಸಮಾಜವಾದಿ, ಬಹುಜನ ಸಮಾಜ ಪಕ್ಷ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು ಭಾರತ್ ಬಂದ್‍ಗೆ ಬೆಂಬಲ ಘೋಷಿಸಿದ್ದು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ.

ಶಾಲಾ-ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಿಸಿಲ್ಲ. ಸರ್ಕಾರಿ ನೌಕರರಿಗೆ ರಜೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಶಾಲಾ-ಕಾಲೇಜುಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.  ಬ್ಯಾಂಕ್, ಅಂಚೆ ಕಚೇರಿಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ. ನೋಟ್‍ಬ್ಯಾನ್ ನಿಷೇಧದಿಂದ ಕಳೆದ 15 ದಿನಗಳಿಂದ ಹಣ ಪಡೆಯಲು ತಮ್ಮಲ್ಲಿರುವ ಹಣ ಠೇವಣಿ ಮಾಡಲು ಜನ ಬ್ಯಾಂಕ್‍ಗಳ ಮುಂದೆ ನಿಂತು ಹೈರಾಣಾಗಿದ್ದಾರೆ. ಮತ್ತೆ ಶನಿವಾರ, ಭಾನುವಾರ ಎರಡು ದಿನಗಳ ರಜೆ ನಂತರ ಮತ್ತೆ ಬ್ಯಾಂಕ್‍ಗಳ ಜನ ತೆರಳಬೇಕಾಗಿದೆ. ನಾಳೆ ಬಂದ್ ಹಿನ್ನೆಲೆಯಲ್ಲಿ ಜನರಿಗೆ ಅನಾನುಕೂಲವಾಗುವ ಸಾಧ್ಯತೆ ಇದೆ.

ನೋಟು ನಿಷೇಧದ ಕ್ರಮದಿಂದ ಬಡ ಹಾಗೂ ಮಧ್ಯಮ ವರ್ಗದವರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ವ್ಯಾಪಾರ-ವಹಿವಾಟು ಸಂಪೂರ್ಣ ಕುಸಿದಿದೆ. ತಮ್ಮ ಹಣ ಪಡೆಯಲು ಬ್ಯಾಂಕ್‍ಗಳ ಮುಂದೆ ಜನ ಪ್ರತಿದಿನ ಸರದಿಯಲ್ಲಿ ನಿಲ್ಲಬೇಕಾಗಿದೆ. ನೋಟು ನಿಷೇಧದ ನಂತರ ಕೇಂದ್ರ ಸರ್ಕಾರ ಸರಿಯಾದ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ. ಇದನ್ನು ವಿರೋಧಿಸಿ ನಾಳೆ ಆಕ್ರೋಶ್ ದಿವಸ್ ಭಾರತ್ ಬಂದ್‍ಗೆ ಕರೆ ಕೊಟ್ಟಿದ್ದು, ಬಂದ್ ಆರಂಭಕ್ಕೂ ಮುನ್ನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾಂಗ್ರೆಸ್, ಟಿಎಂಸಿ, ಸಮಾಜವಾದಿ ಪಾರ್ಟಿ, ಎಡಪಕ್ಷಗಳು ಸೇರಿದಂತೆ ಎಲ್ಲ ವಿಪಕ್ಷಗಳೂ ಆಕ್ರೋಶ್ ದಿವಸ್‍ನಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದರೆ, ಬಿಜೆಪಿ ನೋಟು ನಿಷೇಧ ಕ್ರಮವನ್ನು ಬೆಂಬಲಿಸಿ ಸಂಭ್ರಮಾಚರಣೆ ಮಾಡುವುದಾಗಿ ಘೋಷಿಸಿದೆ.  ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಾರೋ ಅಥವಾ ಬ್ಯಾಂಕ್‍ಗಳ ಮುಂದೆ ಹೋಗುತ್ತಾರೋ ಅಥವಾ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೋ ನೋಡಬೇಕು.  ಬಂದ್‍ಗೆ ಬೆಂಬಲ ನೀಡಬೇಡಿ, ನಾನು ಬಂದ್ ಪರವಾಗಿ ಇಲ್ಲ. ಮೋದಿ ಪರವಾಗಿದ್ದೇನೆ. ಬಂದ್‍ಗೆ ಬೆಂಬಲಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಿ ನೋಟು ನಿಷೇಧದಿಂದ ವ್ಯಾಪಾರ-ವಹಿವಾಟು ಕುಸಿದಿದೆ. ಬಡವರ ಬದುಕು ಬರ್ಬಾದ್ ಆಗಿದೆ. ಇತ್ಯಾದಿ ಸಂದೇಶಗಳು ವಾಟ್ಸಾಪ್‍ನಲ್ಲಿ ಹರಿದಾಡುತ್ತಿವೆ. ಪರ-ವಿರೋಧದ ಚರ್ಚೆಯಾಗುತ್ತಿವೆ.

ಭಾರತ್ ಬಂದ್ ಸಂದರ್ಭದಲ್ಲಿ ಸಾಕಷ್ಟು ಸಂಘಟನೆಗಳವರು, ರಾಜಕೀಯ ಪಕ್ಷಗಳವರು, ಸ್ವಯಂಸೇವಾ ಸಂಘದವರು ಪತ್ರಿಕಾಗೋಷ್ಠಿ ನಡೆಸಿ ಪರ- ವಿರೋಧ ಮಾಡುವುದು ಸಾಮಾನ್ಯವಾಗಿತ್ತು. ಆದರೆ, ಅಂತಹ ಯಾವುದೇ ಪ್ರಸಂಗಗಳು ಜರುಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಭದ್ರತೆ ಕೈಗೊಂಡಿದೆ.
ನಾಳೆ ನಡೆಯಬೇಕಿದ್ದ ವಿವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಬಿಬಿಎಂಪಿ ಯಲ್ಲಿ ಇಂದು ಕರ್ತವ್ಯ ನಿರ್ವಹಿಸಲು ಸೂಚಿಸಲಾಗಿದೆ.
ಒಟ್ಟಾರೆ ನಾಳಿನ ಆಕ್ರೋಶ್ ದಿವಸ್ ಗೊಂದಲ ಮುಂದುವರಿದಿದೆ. ಹಲವು ಸೇವೆಗಳಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಈಗಾಗಲೇ ಕಾವೇರಿ ಹೋರಾಟ ಸಂದರ್ಭದಲ್ಲಿ ಶಾಲಾ-ಕಾಲೇಜುಗಳಿಗೆ ಸಾಕಷ್ಟು ರಜೆ ನೀಡಲಾಗಿದೆ. ಎರಡು-ಮೂರು ಬಾರಿ ಕರ್ನಾಟಕ ಬಂದ್ ಮಾಡಲಾಗಿದೆ. ಕಾವೇರಿ ಗಲಭೆಯಲ್ಲಿ ಲಾರಿ ಮಾಲೀಕರು ಸಾಕಷ್ಟು ಜರ್ಝರಿತರಾಗಿದ್ದಾರೆ. ಹಾಗಾಗಿ ಲಾರಿ ಮಾಲೀಕರು ಬಂದ್‍ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ.

ನಮಗೆ ಪೆಟ್ರೋಲ್ ಬಂಕ್‍ಗಳಲ್ಲಿ ಹಳೆಯ 500, 1000ರೂ. ನೋಟುಗಳಿಗೆ ಡೀಸೆಲ್ ದೊರೆಯುತ್ತಿದೆ. ಟೋಲ್‍ಗಳನ್ನು ಫ್ರೀ ಮಾಡಿದ್ದಾರೆ. ನಾವೇಕೆ ಬಂದ್‍ಗೆ ಬೆಂಬಲ ನೀಡಬೇಕೆಂಬುದು ಅವರ ವಾದವಾಗಿದೆ.   ಶನಿವಾರ, ಭಾನುವಾರ ಕಚೇರಿಗೆ ರಜೆ ಇದ್ದುದರಿಂದ ಭಾರತ್ ಬಂದ್ ರಜೆ ನಿರೀಕ್ಷೆ ಹಿನ್ನೆಲೆಯಲ್ಲಿ ಬಹು ರಾಷ್ಟ್ರೀಯ ಕಂಪೆನಿ ನೌಕರರು ಮೋಜು-ಮಸ್ತಿಗೆ ತೆರಳಿದ್ದಾರೆ.   ನೋಟು ನಿಷೇಧದಿಂದ ಪ್ರಾರಂಭದಲ್ಲಿದ್ದ ಸಮಸ್ಯೆ ಕ್ರಮೇಣ ಕಡಿಮೆಯಾಗಿರುವುದರಿಂದ ನಾಳಿನ ಪ್ರತಿಭಟನೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin