ಬಡಜನರಿಗೆ ಚಿಕಿತ್ಸೆ ಸೌಲಭ್ಯ ಒದಗಿಸಲು ವೈದ್ಯಕೀಯ ಕಾಲೇಜು : ಸಿ.ಎಂ

Spread the love

siddu

ಚಾಮರಾಜನಗರ, ಸೆ.20- ಗ್ರಾಮೀಣರು ಹಾಗೂ ಬಡಜನರಿಗೆ ಸಮರ್ಪಕವಾದ ವೈದ್ಯಕೀಯ ಸೌಲಭ್ಯ ಒದಗಿಸುವ ಉದ್ದೇಶದೊಂದಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಚಾಮರಾಜನಗರ ಹೊರವಲಯದ ಯಡಪುರದಲ್ಲಿ ನೂತನ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ರಾಜ್ಯ ಸರ್ಕಾರ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಉದ್ದೇಶ ಹೊಂದಿದೆ. ಹೀಗಾಗಿ ಆರಂಭದಲ್ಲೆ 6 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವ ಘೋಷಣೆ ಮಾಡಲಾಗಿತ್ತು.

ವೈದ್ಯಕೀಯ ಕಾಲೇಜು ಪ್ರಾರಂಭವಾದರೆ ಅದಕ್ಕೆ ಪೂರಕವಾಗಿ ಆಸ್ಪತ್ರೆ ಸೌಲಭ್ಯವನ್ನು ಸಹ ಒದಗಿಸಬೇಕಾಗುತ್ತದೆ. ಎಲ್ಲಾ ವರ್ಗದ ಜನರಿಗೆ ಆರೋಗ್ಯಸೇವೆ ಹಾಗೂ ಉತ್ತಮ ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಲ್ಲಿ ಅವಕಾಶ ಮಾಡಿಕೊಡುವ ಉದ್ದೇಶದಿಂದಲೇ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತಿದೆ ಎಂದು ವಿವರಿಸಿದರು.ಗ್ರಾಮೀಣ ಜನತೆಗೆ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕೆಂಬ ಕಾರಣದಿಂದ ಆರಂಭಿಸಲಾಗುತ್ತಿರುವ ವೈದ್ಯಕೀಯ ಕಾಲೇಜುಗಳು 500ರಿಂದ 600 ಹಾಸಿಗೆ ಸಾಮಥ್ರ್ಯವುಳ್ಳ ಆಸ್ಪತ್ರೆಯನ್ನಾಗಿ ನಿರ್ಮಾಣ ಮಾಡಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆ ಬಡಜನರಿಗೆ ತಲುಪಿದರೆ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಜನಸಂಖ್ಯೆಗೆ ಅನುಗುಣವಾಗಿ ಅವರ ಕಲ್ಯಾಣಕ್ಕಾಗಿ ಪ್ರಸಕ್ತ ಸಾಲಿನಲ್ಲಿ 19542 ಕೋಟಿ ರೂ. ಗಳನ್ನು ವೆಚ್ಚ ಮಾಡುತ್ತಿದೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದರು.ಜಿಲ್ಲಾ ಉಸ್ತುವಾರಿ ಸಚಿವಎಚ್.ಎಸ್. ಮಹದೇವಪ್ರಸಾದ್ ಮಾತನಾಡಿ, ಕಳೆದ ಮೂರುವರೆ ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅವಶ್ಯಕತೆಯಿರುವ ಎಲ್ಲ ಸೌಲಭ್ಯಗಳನ್ನು ಪೂರೈಸಲು ಮುಖ್ಯಮಂತ್ರಿಯವರು ಸ್ಪಂದಿಸಿದ್ದಾರೆ. 238 ಕೋಟಿ ರೂ. ವೆಚ್ಚದಲ್ಲಿ 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಮಹತ್ವದ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದರು.

ವೈದ್ಯಕೀಯ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ಸಾರ್ವಜನಿಕರ ಹಣದಲ್ಲಿ ವೈದ್ಯಕೀಯ ಕಾಲೇಜುಗಳನ್ನು ಕಟ್ಟಲಾಗುತ್ತದೆ. ಹೀಗಾಗಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಕನಿಷ್ಠ 1 ವರ್ಷವಾದರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಗ್ರಾಮಿಣ ಭಾಗದಲ್ಲಿ ಚಿಕಿತ್ಸೆ ನೀಡುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದರು.ಸಂಸದ ಆರ್. ಧ್ರುವನಾರಾಯಣ, ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಪೌರಾಡಳಿತ ರಾಜ್ಯ ಸಚಿವ ಈಶ್ವರ್ ಬಿ, ಖಂಡ್ರೆ, ವಿಧಾನ ಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ಜಿಪಂ ಅಧ್ಯಕ್ಷ ಎಂ. ರಾಮಚಂದ್ರ, ಶಾಸಕರಾದ ಎಸ್. ಜಯಣ್ಣ, ಆರ್. ನರೇಂದ್ರ, ಕೆ.ಟಿ. ಶ್ರೀಕಂಠೇಗೌಡ, ಆರ್. ಧರ್ಮಸೇನಾ, ನಗರಸಭೆ ಅಧ್ಯಕ್ಷೆ ಎಸ್.ಎನ್. ರೇಣುಕ, ಉಪಾಧ್ಯಕ್ಷ ಆರ್. ಎಂ. ರಾಜಪ್ಪನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸಯ್ಯದ್ ರಫೀ, ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ: ಇದೇ ವೇಳೆ ಮುಖ್ಯಮಂತ್ರಿಯವ  ಸಿದ್ದರಾಮಯ್ಯ ವಿವಿಧ ಅಬಿವೃದ್ದಿ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin