ಬದುಕಿನಲ್ಲಿ ಗುರಿ ಇಲ್ಲದವರೆ ಅಂಧರು : ನಿರ್ಮಲಾನಂದನಾಥ ಸ್ವಾಮೀಜಿ

nir

ಚಿಕ್ಕಮಗಳೂರು ನ.15-ಅಂಧ ಎಂದರೆ ಕಣ್ಣಿಲ್ಲದವರಲ್ಲ, ನೋಡುವ ಇಂದ್ರಿಯವಿದ್ದರೂ ಆತ್ಮವನ್ನು ದರ್ಶಿಸುವ ಹಂಬಲವಿಲ್ಲದವರು, ಬದುಕಿನಲ್ಲಿ ಗುರಿ ಇಲ್ಲದವರು ಅಂಧರು ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದ ಅವರು, ಅಂಧರಿಗಿರುವ ಏಕಾಗ್ರತೆ ಕಣ್ಣಿರುವ ಬೇರೆ ಯಾವುದೇ ವ್ಯಕ್ತಿಗೂ ಇರುವುದಿಲ್ಲ, ಅಂಗವೈಕಲ್ಯತೆ ಶಾಪವಲ್ಲ ಎಂಬುದನ್ನು ಅರಿತು ಆಂತರ್ಯದಲ್ಲಿ ಭರವಸೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸ್ವತಃ ಹಾರ್ಮೋನಿಯಂ ನುಡಿಸಿ ಮಕ್ಕಳಿಗೆ ಭಕ್ತಿಗೀತೆಯನ್ನು ಹೇಳಿಕೊಟ್ಟ ಶ್ರೀಗಳು ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳು ಬೆಂಗಳೂರಿನ ತಮ್ಮ ಮಠಕ್ಕೆ ಬಂದರೆ ಅಲ್ಲಿ ಅವರಿಗೆ ಸಂಗೀತವನ್ನು ಕಲಿಸುವುದರ ಜೊತೆಗೆ ಸಂಬಳ ಸಹ ನೀಡಿ ಉತ್ತಮ ಜೀವನವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಮುನ್ನ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥಸ್ವಾಮೀಜಿ ಮತ್ತು ವಿದ್ಯಾಧರನಾಥ ಸ್ವಾಮೀಜಿ ಅವರೊಂದಿಗೆ ಆಗಮಿಸಿದ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಇದೇ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಶಾಲೆಯ ವಿದ್ಯಾರ್ಥಿಗಳಿಗೆ ಸ್ವಾಮೀಜಿ ವಸ್ತ್ರಗಳನ್ನು ವಿತರಿಸಿದರು. ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ಉಪಾಧ್ಯಕ್ಷೆ ಗೌರಮ್ಮ ಬಸವೇಗೌಡ, ಆಡಳಿತಾಧಿಕಾರಿ ಎಂ.ಎಸ್.ನಂಜುಂಡಸ್ವಾಮಿ, ಖಜಾಂಚಿ ವಾಣಿನಾಯ್ಡು, ಕಾರ್ಯದರ್ಶಿ ಮಹೇಶ್, ನಿರ್ದೇಶಕರಾದ ಕಾತ್ಯಾಯಿನಿ ಚಂದ್ರಶೇಖರ್, ಮೋಹನ್, ಗಿರಿಧರ್ ಯತೀಶ್, ಎಐಟಿ ಪ್ರಾಂಶುಪಾಲ ಡಾ.ಸುಬ್ರಾಯ ಉಪಸ್ಥಿತರಿದ್ದರು.

Sri Raghav

Admin