ಬದುಕಿನಾಟದಲ್ಲಿ ಸೋತರೂ ನೇತ್ರದಾನ ಮಾಡಿ ಗೆದ್ದ ‘ಚಿರಂಜೀವಿ’ ಸೌಮ್ಯಶ್ರೀ

soumya

ಅವರ ಕಣ್ಣುಗಳಲ್ಲಿ ಸಾಧಿಸುವ ಛಲವಿತ್ತು. ಸಮಾಜಕ್ಕೆ ಓರ್ವ ವೈದ್ಯೆಯಾಗಿ ಮದರ್ ಥೆರೆಸಾರಂತೆ ರೋಗಿಗಳ ಆರೈಕೆ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಆದರೆ ವಿಧಿ ತನ್ನ ಬಾಳಿನಲ್ಲಿ ಚೆಲ್ಲಾಟವಾಡುತ್ತೆ ಅಂತ ಅವರು ಕನಸು ಮನಸ್ಸಿನಲ್ಲೂ ನಂಬಿರಲಿಲ್ಲ. ಇದು ಬೈಲಹೊಂಗಲ ತಾಲೂಕಿನ ಬೇವಿನಕೊಪ್ಪ ಗ್ರಾಮದ ಸೌಮ್ಯಶ್ರೀ ಮಲ್ಲಿಕಾರ್ಜುನ ಬೆನಕಟ್ಟಿ ಎಂಬ ಬಾಲಕಿಯ ಕಥೆಯ ವ್ಯಥೆ.

ಬೆಳಗಾವಿಯ ಕೆಎಲ್‍ಇ ಬಿಎಂ ಕಂಕಣವಾಡಿಯ ಮಹಾವಿದ್ಯಾನಿಲಯದ ಬಿಎಎಂಎಸ್ ವ್ಯೆದ್ಯ ವಿದ್ಯಾರ್ಥಿನಿಯಾಗಿದ್ದ ಇವರು ತನ್ನ ಸಾವಿನಲ್ಲೂ ಮಾನವೀಯತೆ ಮೆರೆದ ತ್ಯಾಗಮಯಿ. ತನ್ನ ಅಂತ್ಯ ಕಾಲದಲ್ಲಿ ತನ್ನ ಎರಡು ಕಣ್ಣುಗಳನ್ನು ಇಬ್ಬರು ಅಂಧರಿಗೆ ದಾನ ಮಾಡಿ ಸಾರ್ಥಕತೆಯ ಉಸಿರನ್ನು ನೆಮ್ಮದಿಯಾಗಿ ಬಿಟ್ಟ ಮಹಾಮಾನವತಾವಾದಿಯ ಯಶೋಗಾಥೆ. ಅತಿ ಚಿಕ್ಕ ವಯಸ್ಸಿನಲ್ಲಿ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಅಕಾಲಿಕ ಮರಣಕ್ಕೆ ತುತ್ತಾಗುತ್ತಾರೆಂದು ಅವರಿಗೆ ಆರೈಕೆ ಮಾಡಿದ ವೈದ್ಯರು ಕೂಡಾ ನಿರೀಕ್ಷೆ ಮಾಡಿರಲಿಲ್ಲ. ಸುಮಾರು 4-5 ವರ್ಷಗಳ ಕಾಲ ಒಂದಿಲ್ಲಾ ಒಂದು ಬೇರೆಯಾದ ವಿಭಿನ್ನ ರೋಗಗಳು ವೈದ್ಯರಿಗೆ ಸವಾಲಾಗಿ ಪರಿಣಮಿಸಿದವು. ಅವರ ವೈದ್ಯ ವೃತ್ತಿಯ ಓದಿಗೆ ತೊಡಕಾಗಿ ಪರಿಣಮಿಸಿದವು.

ಆಗಾಗ ಗುಣವಾದಂತೆ ಮತ್ತೆ ಒಂದಿಷ್ಟು ದಿನದ ನಂತರ ರೋಗ ಉಲ್ಭಣವಾಗುವುದು ಆಸ್ಪತ್ರೆಗೆ ಆಡ್ಮಿಟ್ ಆಗುವುದು, ಅವರ ವೈದ್ಯ ವೃತ್ತಿಯ ವ್ಯಾಸಂಗಕ್ಕೆ ಕಂಟಕವಾಗಿ ಪರಿಣಮಿಸಿತು. ತಂದೆ ಮಲ್ಲಿಕಾರ್ಜುನ ಬೆನಕಟ್ಟಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯರಾಗಿದ್ದರು. ಇದ್ದ ಒಬ್ಬ ಮಗಳ ಉಳಿವಿಗಾಗಿ ಸುಮಾರು 25ಲಕ್ಷಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡುವಲ್ಲಿ ಎಂದೂ ಹಿಂದೆ ಮುಂದೆ ನೋಡಲಿಲ್ಲ. ಸೌಮ್ಯಶ್ರೀ ತಂದೆ-ತಾಯಿ ತಮ್ಮ ಮಗಳ ಉಳಿವಿಗಾಗಿ ಕಾಣದ ದೇವರಿಗೆಲ್ಲಾ ಅದೆಷ್ಟು ಹರಕೆ ಹೊತ್ತರೋ ಆ ದೇವರೇ ಬಲ್ಲ. ಆದರೆ ಅವರಲ್ಲಿ ಭರವಸೆ ಆಸೆಯ ಸೆಲೆಯೊಂದು ಇದ್ದೇ ಇತ್ತು. ಇಂದಲ್ಲಾ ನಾಳೆ ನಮ್ಮ ಮಗಳು ಗುಣಮುಖಳಾಗಿ ವೈದ್ಯಳಾಗಿ ಸಮಾಜ ಸೇವೆಗೆ ಅಣಿಯಾಗುತ್ತಾಳೆ ಎಂದು ಅರಿತಿದ್ದರು. ಶಿಕ್ಷಕ ಸಮುದಾಯದ ಅದೆಷ್ಟೋ ಶಿಕ್ಷಕರು ತಮ್ಮ ರಕ್ತವನ್ನು ಅವರಿಗೊಸ್ಕರ ದಾನ ಮಾಡಿ ಬೇಗ ಗುಣಮುಖವಾಗುವಂತೆ ಪ್ರಾರ್ಥಿಸಿದ್ದರು. ಕಂಕಣವಾಡಿ ವಿದ್ಯಾಲಯದ ಪ್ರೊ ಫೆಸರ್‍ಗಳು ಅವರಿಗೆ ತೋರಿದ ಮಾನಸಿಕ ಸ್ಥೈರ್ಯ ನಿಜಕ್ಕೂ ಮೆಚ್ಚುವಂತಹದು. ಅವರ ಕಾಲೇಜಿನ ಗುರು ಗಳಾದ ಅಂಗ ರಚನಾಶಾಸ್ತ್ರದ ಪ್ರೊ . ಡಾ. ಮಹಾಂತೇಶ ರಾಮಣ್ಣವರ ಅವರು ಈಗಾಗಲೇ ತಮ್ಮ ತಂದೆಯವರ ಇಚ್ಛೆಯ ಮೇರೆಗೆ ಅವರ ದೇಹವನ್ನು ಅಂಗ ಛೇಧನ ಮಾಡಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದರು.

ಇದು ದೇಶ, ಅಂತಾರಾಷ್ಟ್ರ ಮಟ್ಟದಲ್ಲೂ ಸಂಚಲನ ಮೂಡಿಸಿತ್ತು. ಅವರೇ ಸ್ಥಾಪಿಸಿದ್ದ ಡಾ. ರಾಮಣ್ಣವರ ಫೌಂಡೇಶನ್ ಮೂಲಕ ಮರಣದ ನಂತರ ದೇಹದಾನ, ಅಂಗದಾನ ಮಾಡುವಲ್ಲಿ ಜನರಲ್ಲಿ ಮೂಡಿಸಿದ್ದ ಜಾಗೃತಿಯು ಸೌಮ್ಯಶ್ರೀ ಮೇಲೆ ಬಹಳಷ್ಟು ಆಳ ಪರಿಣಾಮ ಬೀರಿತ್ತು. ಹಾಸಿಗೆ ಮೇಲೆ ಸಾವು ಬದುಕಿನ ಮಧ್ಯೆ ನೋವಿನ ಮಡಿಲಲ್ಲಿ ಮಲಗಿಕೊಂಡಿದ್ದ ಮಾನವೀಯತೆಯ ಮಗಳು ಒಂದು ಕ್ಷಣ ಗಟ್ಟಿ ನಿರ್ಧಾರಕ್ಕೆ ಬಂದಿದ್ದಳು. ನನ್ನ ಮರಣದ ನಂತರ ಈ ನನ್ನ ಕಣ್ಣುಗಳು ಕಮರಿ ಹೋಗಬಾರದು. ಇವು ಅಂಧರ ಬಾಳಿಗೆ ಬೆಳಕಾಗಬೇಕು ಎಂದು ನಿರ್ಧರಿಸಿ ತನ್ನ ಮನದಾಳದ ತ್ಯಾಗದ ಮಾತುಗಳನ್ನು ವೈದ್ಯರ ಮುಂದೆ ಹೇಳಿಯೇ ಬಿಟ್ಟಳು. ದೇವರು ಅವಳ ಆಯುಷ್ಯ ರೇಖೆಯನ್ನು ಈ ಭೂಮಿ ಮೇಲೆ ಇಷ್ಟೇ ಬರೆದಿದ್ದ ಅಂತ ಕಾಣುತ್ತೆ. ಸೆ. 16 ವೈದ್ಯ ವಿದ್ಯಾರ್ಥಿನಿ ಸೌಮ್ಯಶ್ರೀಯ ಇಹಲೋಕದ ಯಾತ್ರೆಯ ಅಂತಿಮ ದಿನ. ರೋಗಿಗಳ ಸೇವೆ ಮಾಡಬೇಕೆಂಬ ಆ ಉತ್ಕಟ ಬಯಕೆ ಹೊಂದಿದ ಆ ಕುಸುಮ ಬಾಡಿ ಹೋಯಿತು.

ಒಂದು ಕ್ಷಣ ಕೆಎಲ್‍ಇ ಆವರಣವೇ ಸ್ತಬ್ಧವಾಯಿತು. ಇಡೀ ವೈದ್ಯ ಕ್ಷೇತ್ರದ ವಿದ್ಯಾರ್ಥಿಲೋಕವೇ ಕಣ್ಣೀರ ಕಡಲಲ್ಲಿ ಮಿಂದೆದ್ದಿತು. ಕೊನೆಗೂ ಅವರ ಅಂತಿಮ ಇಚ್ಚೆಯ ಮೇರೆಗೆ ಕಣ್ಣುಗಳನ್ನು ಡಾ. ರಾಮಣ್ಣವರ ಫೌಂಡೇಶನ್‍ಗೆ ನೇತ್ರದಾನ ಮಾಡಲಾಯಿತು. ಅವರ ಆ ಎರಡು ಕಣ್ಣುಗಳು ಇಬ್ಬರು ಅಂಧರ ಬಾಳಿಗೆ ಬೆಳಕಾದವು. ಇಡೀ ಶಿಕ್ಷಕ ಸಮುದಾಯ ಕೆ.ಎಲ್.ಇ. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಪಾರ ಅಭಿಮಾನಿಗಳ ಶೋಕಸಾಗರದ ಮಧ್ಯೆ ಅವರ ಅಂತಿಮ ಸಂಸ್ಕಾರ ಬೇವಿಕೊಪ್ಪದಲ್ಲಿ ನಡೆಯಿತು. ನಿಜಕ್ಕೂ ಸೌಮ್ಯಶ್ರೀ ಇಂದಿನ ಯುವ ಪೀಳಿಗೆ ಮಾದರಿಯಾಗಿದ್ದಾರೆ. ಅವರ ಉದಾರ ತ್ಯಾಗದ ನೇತ್ರದಾನ ಇಂದಿನ ಸಮಾಜಕ್ಕೆ ಅನುಕರಣೀಯ. ಅಂತಹ ಯುಕ್ತ ಸಂಸ್ಕಾರ ಹೊಂದಿದ ವಿದ್ಯಾರ್ಥಿನಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರ ಮಾದರಿ ವ್ಯಕ್ತಿತ್ವ ಮತ್ತು ಸಾವಿನಲ್ಲಿ ತೋರಿದ ಮಾನವಿಯ ಔದಾರ್ಯತೆ ನಿಜಕ್ಕೂ ಈ ಸಮಾಜಕ್ಕೆ ಮಾದರಿ.

ಸೌಮ್ಯಶ್ರೀಯ ಈ ಮಾನವಿಯ ಕಾರ್ಯಕ್ಕೆ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವ್ಯವಸ್ಥಾಪಕ ನಿರ್ದೇಶಕ ಡಾ. ಎಂ.ವಿ. ಜಾಲಿ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಬಿ.ಎಸ್. ಪ್ರಸಾದ, ನೇತ್ರ ಭಂಡಾರ ತಜ್ಞ ಅರವಿಂದ ತೆನಗಿ ಹಾಗೂ ರಾಮಣ್ಣವರ ಫೌಂಡೇಶನ್ ಗೌರವ ಕಾರ್ಯದರ್ಶಿ ಡಾ. ಸುಶೀಲಾದೇವಿ ಮುಂತಾದವರು ಬೆನಕಟ್ಟಿ ಕುಟುಂಬಕ್ಕೆ ಸಾಂತ್ವನ ಹೇಳಿ ಕ್ರತಜ್ಞತೆ ಸಲ್ಲಿಸಿದ್ದು ನಿಜಕ್ಕೂ ಮನ ಮಿಡಿಯುವಂತಹದು. ಅವರ ಈ ಮನ ಮಿಡಿಯುವ ಕಾರ್ಯ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿಯಾಗಲಿ ಎಂದೇ ಹಾರೈಸುತ್ತ ಅವರ ಕುಟುಂಬಕ್ಕೆ ಆ ಭಗವಂತ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಸೌಮ್ಯಶ್ರೀ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದೇ ಹಾರೈಸೋಣ ಅಲ್ಲವೇ?

 – ಬಸವರಾಜ ಗಂ ಪುರಾಣಿಕಮಠ  ಬೈಲಹೊಂಗಲ.

Sri Raghav

Admin