ಬನ್ನಮ್ಮದೇವಿ ಜಾತ್ರಾ ಮಹೋತ್ಸವಕ್ಕೆ ತೆರೆ

pandavapura2
ಪಾಂಡವಪುರ, ಏ.24-ಪೂರ್ವಿಕರ ಕಾಲದಿಂದಲೂ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸಿಕೊಂಡು ಬಂದಿರುವ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಗ್ರಾಮ ದೇವತೆ ಶ್ರೀ ಬನ್ನಮ್ಮದೇವಿ ಹಬ್ಬದ ಜಾತ್ರಾ ಮಹೋತ್ಸವಕ್ಕೆ ವಿಜೃಂಭಣೆಯ ಚಪ್ಪರ ಉತ್ಸವದ ಮೂಲಕ ಅಂತಿಮ ತೆರೆ ಬಿದ್ದಿತು. ಗಂಡುಲಿ ಹಾಗೂ ಹೆಣ್ಣುಲಿ ಪಾಲಿನ ಕುಟುಂಬದವರು ಹೊಲದ ಗುಡಿಯಿಂದ ಶ್ರೀ ಬನ್ನಮ್ಮ ದೇವಿಯ ಚಪ್ಪರ ರಥೋತ್ಸವವನ್ನು ಹೊತ್ತು ಮೆರೆಸಿದರು. ಚಪ್ಪರ ರಥೋತ್ಸವವು ಹೊಲದ ಗುಡಿಯಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ಕುಣಿತ, ವೀರ ಮಕ್ಕಳ ಕುಣಿತ, ವೀರಗಾಸೆ ನೃತ್ಯ, ಮಂಗಳವಾದ್ಯಗಳೊಂದಿಗೆ ಸಂಚರಿಸಿ ಸ್ವಸ್ಥಾನಕ್ಕೆ ಸೇರಿತು.

ಹಬ್ಬದ ಉಸ್ತುವಾರಿಯನ್ನು ಗ್ರಾಮದ ಜೈ ಶ್ರೀರಾಮ್ ಯುವಕ ಸಂಘದ ಯುವಕರು ಉತ್ತಮವಾಗಿ ನಿಭಾಯಿಸಿ ಗ್ರಾಮಸ್ಥರ ಹಾಗೂ ಊರಿನ ಹಿರಿಯರ ಮೆಚ್ಚುಗೆಗೆ ಪಾತ್ರರಾದರು. ಅದೇ ರೀತಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದ ವ್ಯವಸ್ಥಾಪಕ ಗುರುಮೂರ್ತಿ ಅವರು ಕುಸ್ತಿ ವ್ಯವಸ್ಥೆಯಲ್ಲಿ ಉತ್ತಮವಾಗಿ ನಿರ್ವಹಿಸಿ ಗ್ರಾಮದ ಜನರ ಶ್ಲಾಘನೆಗೆ ಒಳಗಾದರು.ಗ್ರಾಮದ ದೇವಸ್ಥಾನಕ್ಕೆ ಪ್ರವೇಶಿಸಿ ವಿಜೃಂಭಣೆಯಿಂದ ನಡೆದ ಹೂವಿನ ಚಪ್ಪರದ ಮಹಾರಥೋತ್ಸವಕ್ಕೆ ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಸಾಕ್ಷಿಯಾದರು. ಬಳಿಕ ಊರಿನ ಮುಂಭಾಗದಲ್ಲಿ ಧೂಳು ಮರಿಸೇವೆ ನಡೆಯಿತು. ನಂತರ ಊರಿನ ಹೆಂಗಳೆಯರು ತಂಬಿಟ್ಟಿನ ಆರತಿಯೊಂದಿಗೆ ಕಟ್ಟೇರಿ ಗ್ರಾಮದಲ್ಲಿರುವ ಏಳುರಮ್ಮನ ದೇವಸ್ಥಾನಕ್ಕೆ ತಂಬಿಟ್ಟಿನ ಮೆರವಣಿಗೆ ನಡೆಸಿದರು.

ಹಬ್ಬದ ಪ್ರಯುಕ್ತ ಮೂರು ದಿನಗಳವರೆಗೆ ಗ್ರಾಮದಲ್ಲಿ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡಲಾಗಿತ್ತು. ನಿನ್ನೆ ಚಪ್ಪರ ರಥೋತ್ಸವ ಬರುವ ಪ್ರಮುಖ ಬೀದಿಗಳಲ್ಲಿ ರಂಗೋಲಿ ಸ್ಪರ್ಧೆ ಹಾಗೂ ತಂಬಿಟ್ಟಿನ ಆರತಿ ಸೇವೆಗೆ ರಾಮ ಲಕ್ಷ್ಮಣ ಫೌಂಡೇಷನ್‍ನ ದಿಲೀಪ್‍ಕುಮಾರ್ ಅವರಿಂದ ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಳಿಕ ಮಧ್ಯಾಹ್ನ ಗ್ರಾಮದಲ್ಲಿ ಬಾಡೂಟದ ಸಮಾರಾಧನೆ ಕೂಡ ನಡೆಯಿತು. ಅಲ್ಲಿಗೆ ಮೂರು ದಿನಗಳ ಶ್ರೀ ಬನ್ನಮ್ಮ ದೇವಿ ಹಬ್ಬದ ಜಾತ್ರಾ ಮಹೋತ್ಸವಕ್ಕೆ ಅಂತಿಮ ತೆರೆ ಬಿದ್ದಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin