ಬನ್ನಿ..! ಖಿನ್ನತೆ ಮೆಟ್ಟಿನಿಂತ ಸಾಧಕರ ಕಥೆ ಕೇಳಿ

Depression--01

ಸಾಮಾಜಿಕ ಲಕ್ಷಣಗಳು ಕುಟುಂಬ ಮತ್ತು ಬಂಧು-ಮಿತ್ರರ ನಿರ್ಲಕ್ಷ್ಯ, ಕಳಪೆ ಕೆಲಸದ ಸಾಮಥ್ರ್ಯ, ಸಾಮಾಜಿಕವಾಗಿ ದೂರವಿರುವಿಕೆ, ಇತರರ ಮೇಲೆ ವಿಪರೀತ ಅವಲಂಬನೆ, ಮದ್ಯ ಮತ್ತು ಮಾದಕ ವಸ್ತುಗಳ ಸೇವನೆ ಮುಂತಾದವು ಖಿನ್ನತೆಯ ಚಿಹ್ನೆಗಳಾಗಿವೆ.   ಕೆಲವು ವ್ಯಕ್ತಿಗಳಲ್ಲಿ ಖಿನ್ನತೆಯ ಸರಣಿಗಳು ಕೆಲವು ತಿಂಗಳ ತನಕ ಮಾತ್ರ ಕಂಡುಬರುತ್ತದೆ. ಈ ನಡುವೆ ಸಂಪೂರ್ಣ ಸಹಜ ಸ್ಥಿತಿ ತಲುಪುತ್ತಾರೆ. ಕೆಲವು ವ್ಯಕ್ತಿಗಳು ಒಂದು ನಿರ್ದಿಷ್ಟ ಅವಧಿಯಲ್ಲಿ ಖಿನ್ನತೆಗಳ ಸರಣಿಗಳನ್ನು ಹೊಂದಿರುತ್ತಾರೆ ಹಾಗೂ ಇನ್ನೊಂದೆಡೆ ಉನ್ಮಾದ ಸ್ಥಿತಿ ತಲುಪುತ್ತಾರೆ (ಇದನ್ನು ಬೈಪೋಲಾರ್ ಡಿಪ್ರೆಷನ್ ಅಥವಾ ದ್ವಿಧೃವಿ ಖಿನ್ನತೆ ಎಂದು ಕರೆಯುತ್ತಾರೆ. ಈ ಹಿಂದೆ ಇದನ್ನು ಮ್ಯಾನಿಕ್ ಡಿಪ್ರೆಸ್ಸಿವ್ ಸೈಕೋಸಿಸ್ ಎಂದು ಗುರುತಿಸಲಾಗುತ್ತಿತ್ತು)  ಕೆಲವು ವ್ಯಕ್ತಿಗಳು ದೀರ್ಘ ಕಾಲದ ಕಡಿಮೆ ಶ್ರೇಣಿಯ ಹತಾಶೆಗೆ ಗುರಿಯಾಗುತ್ತಾರೆ ಹಾಗೂ ಸಣ್ಣಪುಟ್ಟ ಪರಿಣಾಮಗಳಿಗೂ ಹೆಚ್ಚು ಹತಾಶೆ, ಸಮಸ್ಯೆಯಿಂದ ಬಳಲುತ್ತಾರೆ. ಇದನ್ನು ಡಿಸ್ತಿಮಿಯಾ ಎನ್ನುತ್ತೇವೆ.ಚಿಕಿತ್ಸಾ ವಿಧಾನ  : 

ಖಿನ್ನತೆಯಿಂದ ವೈಯಕ್ತಿಕ, ಅಂತರ-ವೈಯಕ್ತಿಕ ಹಾಗೂ ಸಾಮಾಜಿಕ ಸಂಕಷ್ಟಗಳಿಗೆ ಕಾರಣವಾಗಿ ವ್ಯಕ್ತಿಯ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗುತ್ತದೆ.
ಇದೇ ಸ್ಥಿತಿ ಮುಂದುವರಿದರೆ ಚೇತರಿಕೆ ಅಸಾಧ್ಯ. ಜೊತೆಗೆ ನಿಯಂತ್ರಣವೂ ಕಷ್ಟ. ಇಂತಹ ವ್ಯಕ್ತಿಗೆ ವೃತ್ತಿಪರ ನೆರವು ಅಗತ್ಯ. ಇದನ್ನು ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಿದ್ದರೆ ಅದು ಆತ್ಮಹತ್ಯೆಯಲ್ಲಿ ಪರ್ಯಾವಸನವಾಗುವ ಸಂಭವವಿರುತ್ತದೆ.   ತೀವ್ರ ಸ್ವರೂಪದ ಖಿನ್ನತೆಯಲ್ಲಿ ಭ್ರಮೆ ಮತ್ತು ಭ್ರಾಂತಿ ಇರುತ್ತದೆ. ಇಂತಹ ಪ್ರಕರಣಗಳಲ್ಲಿ ವ್ಯಕ್ತಿಯು ನಿರಾಶವಾದಿಯಾಗಿ ಆತ್ಮಹತ್ಯೆಗೂ ಮುಂದಾಗಬಹುದು.

ವೈದ್ಯಕೀಯ ಚಿಕಿತ್ಸೆ :

ಇದಕ್ಕೆ ಹಲವು ಬಗೆಯ ಪ್ರತಿರೋಧಕ ಚಿಕಿತ್ಸೆಗಳು ಲಭ್ಯವಿವೆ. ರೋಗಿಗಳು ಇದಕ್ಕೆ ಸ್ಪಂದಿಸುತ್ತಾರೆ. ಇಸಿಟಿ (ಎಲೆಕ್ಟ್ರೋ ಷಾಕ್ ಟ್ರೀಟ್‍ಮೆಂಟ್) ತೀವ್ರ ಸ್ವರೂಪದ ಖಿನ್ನತೆಗೆ ಚಿಕಿತ್ಸೆಯಾಗಬಹುದು.   ಇಂದಿನ ದಿನಗಳಲ್ಲಿ ಮಾನಸಿಕ ಅನಾರೋಗ್ಯಕ್ಕೆ ಉತ್ತಮ ಮತ್ತು ದುಬಾರಿಯಲ್ಲದ ಔಷಧಿಗಳು ಸುಲಭವಾಗಿ ಲಭಿಸುತ್ತವೆ. ಮಾನಸಿಕ ತಜ್ಞರನ್ನು ಆದಷ್ಟು ಬೇಗ ಭೇಟಿಯಾಗಿ ಸಲಹೆ ಮತ್ತು ಮಾರ್ಗದರ್ಶನ ಪಡೆಯುವುದು ಒಳ್ಳೆಯದು.

ಮಾನಸಿಕ ಚಿಕಿತ್ಸೆ :

ಸೈಕೋಥೆರಪಿ ಸಹ ಸಾಧಾರಣ ಸ್ವರೂಪದ ಖಿನ್ನತೆಯ ಚಿಕಿತ್ಸೆಗೆ ಪರಿಣಾಮಕಾರಿ. ವಿಶೇಷವಾಗಿ ಒತ್ತಡ, ಮಾನಸಿಕ ಮತ್ತು ಅಂತರ ಸಂಬಂಧ ಸಮಸ್ಯೆಗಳಿಗೆ ಸಂಬಂಧಿಸಿದ ಖಿನ್ನತೆಗೆ ಈ ಚಿಕಿತ್ಸೆ ಸೂಕ್ತವಾಗಿರುತ್ತದೆ.

ಕುಟುಂಬದ ಸಹಕಾರ : 

ಖಿನ್ನತೆ ಸಮಸ್ಯೆಗೆ ಒಳಗಾದ ವ್ಯಕ್ತಿಗಳ ಅಸಾಮಾನ್ಯ ನಡವಳಿಕೆ ವಿಧಾನಗಳನ್ನು ಗುರುತಿಸುವ ಮೊದಲ ವ್ಯಕ್ತಿಗಳೆಂದರೆ ಕುಟುಂಬದ ಸದಸ್ಯರು. ಆದ್ದರಿಂದ ಅವರ ಪಾತ್ರವು ಈ ಕೆಳಕಂಡ ವಿಷಯಗಳಲ್ಲಿ ಮಹತ್ವದ್ದಾಗಿರುತ್ತದೆ.  ಆಪ್ತ ಸಮಾಲೋಚನೆ ಕೇಂದ್ರದ ಸಹಾಯದೊಂದಿಗೆ ಮೊದಲೇ ದೋಷ ನಿರ್ಣಯಿಸುವುದು. ಆಪ್ತ ಸಮಾಲೋಚನೆ ನಡೆಸುವವರು ನೀಡುವ ಮಾರ್ಗದರ್ಶನ ಮತ್ತು ಸೂಚನೆಗಳನ್ನು ಪಾಲಿಸುವುದು. ಮನೋ ವೈದ್ಯರನ್ನು ಭೇಟಿ ಮಾಡುವುದು, ಔಷಧಿಗಳನ್ನು ಸಮಯಕ್ಕೆ ಸರಿಯಾಗಿ ರೋಗಿಗೆ ನೀಡುವುದು, ಪ್ರಶಾಂತ ಮತ್ತು ಶಾಂತಿಯುತ ಪರಿಸರವನ್ನು ಒದಗಿಸುವುದು, ಪುನರ್ವಸತಿಗಾಗಿ ವೇಳಾಪಟ್ಟಿ ನಿರ್ವಹಣೆ, ಖಿನ್ನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಗೌರವದಿಂದ ಮತ್ತು ಪ್ರೀತಿಯಿಂದ ಉಪಚಾರ ನೀಡುವುದು.

ಛಲದಂಕ ಮಲ್ಲಿ ನಿಕೋಲಾ  : 

ಕಳೆದ ವಾರ ಬಾಲಿವುಡ್ ಖ್ಯಾತ ತಾರೆ ಆಶಾ ಪರೇಖ್ ಅವರ ಬಗ್ಗೆ ಓದಿದ್ದೀರಿ. ಈ ವಾರ ಅಂಥದ್ದೇ ಇನ್ನೊಬ್ಬ ವ್ಯಕ್ತಿಯ ಬಗ್ಗೆ ನೋಡೋಣ. ಆಶಾ ಪರೇಖ್ ಅವರಿಗಿಂತ ಈ ವ್ಯಕ್ತಿಯ ಸಾಧನೆ ಅಚ್ಚರಿಪಡುವಂಥದ್ದು.   ನಿಕೋಲಾ ಕಿಂಗ್…. ಈ ಹೆಸರನ್ನು ಎಲ್ಲಾದರೂ ಕೇಳಿದ ನೆನಪಿದೆಯೇ? ಹೌದು, ಕೇಳಿರುತ್ತೀರಿ. ಆದರೆ ಬಹುತೇಕರಿಗೆ ಇವಳ ಹಿನ್ನೆಲೆ ತಿಳಿದಿರಿಲಿಕ್ಕಿಲ್ಲ. ಎಲ್ಲರಂತೆಯೇ ಇದ್ದ ನಿಕೋಲಾಳನ್ನು ಅವಳ 16ನೇ ವಯಸ್ಸಿನಲ್ಲಿ ಅನೊರೆಕ್ಸಿಯಾ ಎಂಬ ಕಾಯಿಲೆ ಅಂಟಿಕೊಂಡಿತು. ಈ ಕಾಯಿಲೆಯ ವಿಶೇಷ ಏನೆಂದರೆ ಆಹಾರ ಮತ್ತು ನೀರು ಒಳಗೆ ಹೋಗುವುದೇ ಇಲ್ಲ. ಟ್ಯೂಬ್ ಮೂಲಕ ದ್ರವ ಆಹಾರ ಕೊಟ್ಟರೂ ಕೂಡ ಅದು ಶರೀರಕ್ಕೆ ಅಂಟುವುದೂ ಇಲ್ಲ. ಇಂತಹ ಕಾಯಿಲೆಗೆ ತುತ್ತಾದ ನಿಕೋಲಾ ಬರೀ ಮೂಳೆ, ಚರ್ಮದ ತಡಿಕೆಯಾದಳು. ಆಗ ಅವಳ ತೂಕ ಕೇವಲ 20 ಕೆಜಿ!!(ಮೊದಲನೇ ಚಿತ್ರದಲ್ಲಿ ನೋಡಿ)

ನಿಕೋಲಾಳನ್ನು ಹೆತ್ತವರು ಆಸ್ಪತ್ರೆಗೆ ಸೇರಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದರೂ ಪ್ರಯೋಜನವಾಗಲಿಲ್ಲ. ಆಗ ವೈದ್ಯರು ಇವಳ ಆಸೆ ಕೈಬಿಡುವಂತೆ ಪೋಷಕರಿಗೆ ತಿಳಿಸಿದರು. ಇದೇ ಸ್ಥಿತಿಯಲ್ಲಿ ನಿಕೋಲಾ ಸುಮಾರು ಎಂಟು ವಾರಗಳ ಕಾಲ ಜೀವಚ್ಛವವಾಗಿ ಬದುಕಿದಳು. ಆಗ ಅವಳ ಮನಸ್ಸನ್ನು ಆವರಿಸಿದ್ದು ಸಾವು ಒಂದೇ. ಅದನ್ನು ಬಿಟ್ಟರೆ ಅವಳಿಗೆ ಅನ್ಯ ಮಾರ್ಗವೇ ಇರಲಿಲ್ಲ.   ಅವಳ ಆಂತರ್ಯದಲ್ಲಿ ನಿರಾಸೆಯ ಮೋಡವೇ ಕವಿದಿತ್ತು ನಾನು ಇನ್ನೂ ಏತಕ್ಕಾಗಿ ಬದುಕಿದ್ದೇನೆ ಎಂಬುದಸು ಅವಳ ಮನಸಲ್ಲೆಲ್ಲ ತುಂಬಿತ್ತು. ಅವಳಿಗೇ ಅರಿವಿಲ್ಲದಂತೆ ಮೆಲ್ಲಗೆ ಚೇತರಿಸಿಕೊಳ್ಳ ತೊಡಗಿದಳು. ಆದರೂ ಅವಳಿಗೆ ಬದುಕುವ ಭರವಸೆಯಾಗಲಿ, ಆಸೆಯಾಗಲಿ ಇರಲಿಲ್ಲ.

ಇನ್ನೂ ಕೆಲ ದಿನಗಳ ಕಳೆದ ಮೇಲೆ ಎದ್ದು ನಡೆದಾಡ ತೊಡಗಿದಳು. ಆಗಲೇ ಅವಳ ಮನಸ್ಸಿನಲ್ಲಿ ನಾನೇಕೆ ಏನನ್ನಾದರೂ ಸಾಧಿಸಬಾರದು ಎಂಬ ಆಸೆ ಬಲವಾಗಿ ಬೇರೂರಿತು.
ಅಲ್ಲಿಂದಲೇ ನಿಕೋಲಾ ಜಿಮ್‍ಗೆ ಹೋಗಲಾರಂಭಿಸಿದಳು. ಕೇವಲ 18 ತಿಂಗಳ ಅವಧಿಯಲ್ಲಿ ನಿಕೋಲಾ ತನ್ನ ದೈಹಿಕ ಕಾಯಿಲೆ, ಮಾನಸಿಕ ಖಿನ್ನತೆ, ಹತಾಶೆಗಳಿಂದ ಹೊರಬಂದು ದೇಹದಾಢ್ರ್ಯ ಪಟುವಾಗಿ ಬಿಟ್ಟಳು. ಇದೆಲ್ಲ ನಡೆದದ್ದು 2012ರಲ್ಲಿ.   ಅದ್ಭುತ ಎಂದರೆ 2015ರಲ್ಲಿ ಲಂಡನ್‍ನಲ್ಲಿ ನಡೆದ ಬಾಡಿ ಬಿಲ್ಡರ್ರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಾಂಪಿಯನ್‍ಶಿಪ್ ಪಡೆದು ವಿಶ್ವ ಮಟ್ಟದ ದೇಹದಾಢ್ರ್ಯ ಪಟು ಎನಿಸಿಕೊಂಡಳು (2ನೇ ಚಿತ್ರ ನೋಡಿ.)

ನಿಕೋಲಾಳ ಎತ್ತರ 5.9 ಅಡಿ , ತೂಕ 45 ಕೆಜಿ. ತನ್ನ ಹಿಂದಿನ ಆ ದುರಂತವನ್ನು ನೆನೆಪಿಸಿಕೊಳ್ಳುವ ನಿಕೋಲಾ ಹೀಗೆ ಹೇಳುತ್ತಾಳೆ… “ನಾನು ಕೇವಲ 20 ಕೆಜಿ ತೂಕವಿದ್ದು , ಸಾಯುವ ಸ್ಥಿತಿಯಲ್ಲಿದ್ದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುಮಾರು ಎಂಟು ವಾರಗಳ ಕಾಲ ನಾನು ಅನ್ನ ನೀರು ಇಲ್ಲದೆ ಬದುಕಿದ್ದೆ.    ನನ್ನ ದೇಹದೊಳಗಿನ ಎಲ್ಲ ಅಂಗಗಳು ನಿಷ್ಕ್ರಿಯವಾಗಿದ್ದವು. ತಿಂದ ಆಹಾರ ಪಚನವಾಗುತ್ತಿರಲಿಲ್ಲ. ನಿಕೋಲಾಳ ಅಂತ್ಯ ಸಮೀಪಿಸಿದೆ. ಕೊನೆಯದಾಗಿ ಎಲ್ಲರೂ ಅವಳನ್ನೊಮ್ಮೆ ನೋಡಿಬಿಡಿ. ಬದುಕಿರುವಾಗಲೇ ಅವಳಿಗೆ ವಿದಾಯ ಹೇಳಿ ಬೀಳ್ಕೊಡಿ…ಎಂದು ವೈದ್ಯರು ನನ್ನ ಅಪ್ಪ-ಅಮ್ಮನಿಗೆ ಹೇಳಿದ್ದರಂತೆ. ಏಕೆಂದರೆ ನಾನು ದೈಹಿಕವಾಗಿ ಸತ್ತಂತೆಯೇ ಆಗಿದ್ದೆ. ಆದರೆ ದೇವರು ದೊಡ್ಡವನು. ಈಗ ನಿಮ್ಮೆದುರು ಹೀಗಿದ್ದೇನೆ..”

ನಿಕೋಲಾಳಲ್ಲಿದ್ದ ಛಲ ಮತ್ತು ಸಾಧನೆಯ ಗುರಿ ಅವಳನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಆದರೂ ಅವಳಿಗಿನ್ನೂ ಆ ಕಾಯಿಲೆಯ ಭಯ ಹೋಗಿಲ್ಲ. ಅದಕ್ಕೇ- ನಾನು ಇನ್ನೂ ಕೂಡ ಅನೊರೆಕ್ಸಿಯಾ ವಿರುದ್ಧ ಹೋರಾಡುತ್ತಿದ್ದೇನೆ. ಏಕೆಂದರೆ ಅದಿನ್ನೂ ನನ್ನಿಂದ ಸಂಪೂರ್ಣವಾಗಿ ದೂರವಾಗಿಲ್ಲ.   ಆದರೆ ಅದನ್ನು ನಿಗ್ರಹಿಸಿ ಅದರಿಂದ ವಿಮುಕ್ತಿ ಪಡೆಯುತ್ತೇನೆ ಎಂಬ ಭರವಸೆ ನನ್ನಲ್ಲಿದೆ. ಇನ್ನು ಕೆಲವೇ ದಿನಗಳಲ್ಲಿ ನಾನು ಈಗಿರುವುದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಸಾಧಿಸುತ್ತೇನೆ… ಎನ್ನುತ್ತಾಲೆ ನಿಕೋಲಾ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin