ಬರಗಾಲದ ಮೇಲೆ ಬಿಸಿಲಿನ ಬರೆ, ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ

Temprature-Temp

ಬೆಂಗಳೂರು,ಏ.4 – ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ತಾಪಮಾನ ಜನರನ್ನು ಕಾಡತೊಡಗಿದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನಗಳೆರಡೂ ಏರಿಕೆಯಾಗಿದ್ದು , ಜನರು ನಿತ್ಯ ಪರಿತಪಿಸುವಂತಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸರಾಸರಿ 38ರಿಂದ 40 ಡಿಗ್ರಿ ಸೆಲ್ಸಿಯಸ್‍ನಷ್ಟು ಗರಿಷ್ಠ ತಾಪಮಾನ ಕಂಡುಬರುತ್ತಿದೆ. ಅದೇ ರೀತಿ ಕನಿಷ್ಠ ತಾಪಮಾನವು 20ರಿಂದ 22 ಡಿಗ್ರಿ ಸೆಲ್ಸಿಯಸ್‍ನಷ್ಟು ದಾಖಲಾಗುತ್ತಿದೆ.
ವಾತಾವರಣದಲ್ಲಿ ತೇವಾಂಶದ ಪ್ರಮಾಣ ಕಡಿಮೆಯಾಗಿ ಸೆಕೆ ಹೆಚ್ಚಾಗತೊಡಗಿದೆ. ನಿರಂತರ ಬರದಿಂದಾಗಿ ರಾಜ್ಯದಲ್ಲಿ ನೀರಿಗೆ ಹಿಂದೆಂದೂ ಕಾಣದಂತಹ ಅಭಾವ ಸೃಷ್ಟಿಯಾಗಿದೆ. ಇದರ ಬೆನ್ನಲ್ಲೇ ಈ ಬಿರು ಬೇಸಿಗೆಯಲ್ಲಿ ಕೆಲಸ ಮಾಡುವುದೇ ಕಷ್ಟವಾಗಿದೆ. ಹಗಲಿನಲ್ಲಿ ಬಿಸಿಲತಾಪ ನೆತ್ತಿ ಸುಟ್ಟರೆ, ರಾತ್ರಿ ವೇಳೆ ಸೆಕೆ ಕಾಡುತ್ತದೆ. ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗುತ್ತಿರುವುದೇ ವಾತಾವರಣದಲ್ಲಿನ ವ್ಯತ್ಯಾಸಕ್ಕೆ ಕಾರಣ ಎಂಬುದು ಹವಾಮಾನ ತಜ್ಞರ ಅಭಿಪ್ರಾಯ. ಅಕಾಲಿಕ ಅಥವಾ ಮುಂಗಾರು ಪೂರ್ವ ಮಳೆ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬೀಳುತ್ತಿಲ್ಲ.

ಕಳೆದೊಂದು ತಿಂಗಳಿನಿಂದ ರಾಜ್ಯದ ಹಲವು ಭಾಗಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುತ್ತಿದ್ದರೂ ತಾಪಮಾನ ತಗ್ಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಉಷ್ಣಾಂಶ ಏರಿಕೆಯಾಗತೊಡಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನಿನ್ನೆ ಬೆಂಗಳೂರಿನಲ್ಲಿ ಗರಿಷ್ಠ 38.50 ಡಿಗ್ರಿ ಸೆಲ್ಸಿಯಸ್‍ನಷ್ಟು ಹಾಗೂ ಕನಿಷ್ಠ 22.10 ಡಿಗ್ರಿಸೆಲ್ಸಿಯಸ್‍ನಷ್ಟು ದಾಖಲಾಗಿದೆ.

ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿದರೆ ರಾಜ್ಯದ ಉಳಿದೆಲ್ಲ ಜಿಲ್ಲೆಗಳಲ್ಲಿ 38ರಿಂದ 40 ಡಿಗ್ರಿ ಸೆಲ್ಸಿಯಸ್‍ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಕಲಬುರಗಿಯಲ್ಲಿ 43.20 ಡಿಗ್ರಿ ಸೆಲ್ಸಿಯಸ್‍ನಷ್ಟು ದಾಖಲಾಗಿದೆ. ಅದೇ ರೀತಿ ಬಳ್ಳಾರಿ, ಮಂಡ್ಯ, ರಾಮನಗರ, ರಾಯಚೂರು, ಕೊಪ್ಪಳ, ಯಾದಗಿರಿ, ವಿಜಯಪುರ, ಬೆಳಗಾವಿ, ಬೀದರ್ ಜಿಲ್ಲೆಗಳಲ್ಲೂ 40 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚು ಗರಿಷ್ಠ ಉಷ್ಣಾಂಶ ದಾಖಲಾದ ವರದಿಯಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin