ಬರಗಾಲ ನೀಗಿಸಲು ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ (ಪಿಡಿ) ಹಣ ಬಳಕೆಗೆ ಸರ್ಕಾರ ಅನುಮತಿ

Spread the love

Baragala

ಬೆಂಗಳೂರು, ಏ.26- ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರಗಾಲದಿಂದಾಗಿ ಎಲ್ಲ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆ (ಪಿಡಿ)ಯಲ್ಲಿರುವ ಹಣವನ್ನು ಬಳಸಿಕೊಳ್ಳಲು ಸರ್ಕಾರ ಅನುಮತಿ ನೀಡಿದೆ.   ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಹೆಸರಿನಲ್ಲಿರುವ ಮಿಸಲೇನಿಯಸ್ ವೈಯಕ್ತಿಕ ಠೇವಣಿ ಖಾತೆಗಳನ್ನು ಜೂ.30ರ ವರೆಗೂ ಮುಂದುವರಿಸಲು ಅನುಮತಿ ನೀಡಿ ಆದೇಶ ಹೊರಡಿಸಿದೆ. ಕಳೆದ ಮಾರ್ಚ್ 31ರ ವರೆಗೆ ಮಾತ್ರ ಜಿಲ್ಲಾಧಿಕಾರಿಗಳ ಪಿಡಿ ಖಾತೆಗಳನ್ನು ಬಳಸಿಕೊಳ್ಳಲು  ಅವಕಾಶ ನೀಡಲಾಗಿತ್ತು. ಆದರೆ, ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಬರಪೀಡಿತ ಪ್ರದೇಶಗಳಲ್ಲಿ ತುರ್ತಾಗಿ ಕಾಮಗಾರಿ ಯೋಜನೆಗಳನ್ನು ಕೈಗೊಳ್ಳಲು ಹಣ ಬಿಡುಗಡೆ ಮಾಡುವ ಅವಶ್ಯಕತೆಯಿರುವುದನ್ನು ಮನಗಂಡಿರುವ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.ರಾಜ್ಯ ಹಣಕಾಸು ಇಲಾಖೆ ಪಿಡಿ ಖಾತೆಗಳನ್ನು ಜೂನ್ ಅಂತ್ಯದವರೆಗೂ ಮುಂದುವರಿಸಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ  ಏ.1ರಿಂದ ಮೂರು ತಿಂಗಳವರೆಗೂ ಪಿಡಿ ಖಾತೆಗಳನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಯಾವುದೇ ಅಡೆತಡೆಗಳಿಲ್ಲ. ಆದರೆ, ಜುಲೈ 1ರಿಂದ ಜಿಲ್ಲಾಧಿಕಾರಿಗಳ ವೈಯಕ್ತಿಕ ಖಾತೆಗಳನ್ನು ಮುಂದುವರಿಸಬೇಕಾದರೆ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದೆ.   ಷರತ್ತಿನನ್ವಯ ಪೂರಕ ಮಾಹಿತಿಯನ್ನು ಆರ್ಥಿಕ ಇಲಾಖೆಗೆ ಮೇ 31ರೊಳಗೆ ಸಲ್ಲಿಸಿದರೆ ಜುಲೈನಿಂದ ಪಿಡಿ ಖಾತೆ ಮುಂದುವರಿಸುವ ಬಗ್ಗೆ ಆರ್ಥಿಕ ಇಲಾಖೆ ತೀರ್ಮಾನ ಕೈಗೊಳ್ಳಲಿದೆ.

ಕಳೆದ ಮಾರ್ಚ್ ಅಂತ್ಯಕ್ಕೆ ಮಿಸಲೇನಿಯಸ್ ಪಿಡಿ ಖಾತೆಯಲ್ಲಿರುವ ವಿವಿಧ ಯೋಜನೆಗಳ ಶಿಲ್ಕಿನ ವಿವರಗಳನ್ನು ನಗದು ಪುಸ್ತಕದ ಪ್ರಕಾರ ಒದಗಿಸುವುದು, ಜತೆಗೆ ಖಜಾನೆ ಅಖೈರು ಶಿಲ್ಕಿನ ಪಟ್ಟಿ ಒದಗಿಸಬೇಕು. ಖಜಾನೆ ಅಖೈರು ಶಿಲ್ಕಿಗೂ ಮತ್ತು ನಗದು ಶಿಲ್ಕಿಗೂ ಲೆಕ್ಕ ಹೊಂದಾಣಿಕೆ ವ್ಯತ್ಯಾಸವಿದ್ದರೆ ಸರಿಪಡಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು.

ಹಿಂದಿನ ಸಾಲಿನ ಯೋಜನೆಗಳಿಗೆ ಸಂಬಂಧಿಸಿದಂತೆ ಬಳಕೆಯಾಗದೆ ಉಳಿದ ಅನುದಾನವನ್ನು ಸಂಬಂಧಪಟ್ಟ ಇಲಾಖೆಗೆ ಜಮೆ ಮಾಡಬೇಕು. ಜತೆಗೆ ಜಿಲ್ಲಾಧಿಕಾರಿಗಳ ವೈಯಕ್ತಿಕ ಠೇವಣಿ ಖಾತೆಗಳ ಮೂಲಕ ನಿರ್ವಹಿಸುತ್ತಿರುವ ಎಲ್ಲ ಯೋಜನೆಗಳ ಲೆಕ್ಕಗಳನ್ನು ಸ್ಥಳೀಯ ಲೆಕ್ಕ ಪರಿಶೋಧನೆ ಅಧಿಕಾರಿಗಳಿಂದ ದೃಢೀಕರಿಸಿದ ವರದಿಯನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin