ಬರದ ನಡುವೆಯೂ ಜನರಿಗೆ ನಿರಂತರ ವಿದ್ಯುತ್ ಪೂರೈಕೆ : ಡಿ.ಕೆ.ಶಿ

DKS

ಬೆಂಗಳೂರು, ಅ.22- ಭೀಕರ ಬರಗಾಲದ ನಡುವೆಯೂ ಈ ವರ್ಷ ಬೆಂಗಳೂರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುವುದು. ರೈತರಿಗೆ ಬೆಳಗ್ಗೆ ಮತ್ತು ಸಂಜೆ 6ರಿಂದ 10ಗಂಟೆ ಹೊರತು ಪಡಿಸಿ ಉಳಿದಂತೆ 7 ಗಂಟೆ ವಿದ್ಯುತ್ ಪೂರೈಸಲಾಗುವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.ಪ್ರೆಸ್‍ಕ್ಲಬ್‍ನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ 50 ವರ್ಷಗಳಿಂದಲೂ ಇಲ್ಲದಂತಹ ಬರ ಪರಿಸ್ಥಿತಿ ರಾಜ್ಯದಲ್ಲಿದೆ. ಆದರೂ ಸಮಸ್ಯೆ ಇಲ್ಲದಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು. ವಿದ್ಯುತ್ ಉತ್ಪಾದನೆ ಮತ್ತು ಉಳಿತಾಯಕ್ಕೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.

ಬೆಂಗಳೂರನ್ನು ಇಡೀ ವಿಶ್ವ ಗಮನಿಸುತ್ತಿದೆ. ಐಟಿ-ಬಿಟಿ ದೇಶದ ಆದಾಯದಲ್ಲಿ ಬೆಂಗಳೂರಿನ ಪಾಲು ಶೇ.39ರಷ್ಟಿದೆ. ಇಲ್ಲಿ ಹಗಲು-ರಾತ್ರಿ ಕೆಲಸ ಮಾಡುತ್ತಾರೆ. ಎಂತಹದ್ದೇ ಸಂದರ್ಭ ಬಂದರೂ ವಿದ್ಯುತ್ ಕಡಿತ ಮಾಡದಿರಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. ಜರ್ಮನಿಯಲ್ಲಿ ರಬ್ಬರ್ ಡ್ಯಾಮ್‍ಗಳನ್ನು ನಿರ್ಮಿಸಿ ಸಣ್ಣಪುಟ್ಟದಾಗಿ ಹರಿಯುವ ನೀರು ಮತ್ತು ನದಿಯಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಅದನ್ನೂ ರಾಜ್ಯದಲ್ಲು ಅಳವಡಿಸಲು ಕರ್ನಾಟಕ ವಿದ್ಯುತ್ ನಿಗಮಕ್ಕೆ ಪ್ರಸ್ತಾವನೆ ಬಂದಿದೆ. ಇದನ್ನು ಜಾರಿಗೆ ತರಲು ಚಿಂತನೆ ನಡೆದಿದ್ದು, ಶೀಘ್ರವೇ ಜರ್ಮನಿಗೆ ತೆರಳಿ ಅಧ್ಯಯನ ನಡೆಸಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಹೊಸಬೆಳಕು ಯೋಜನೆ ಜಾರಿಯಲ್ಲಿದೆ. 100ರೂ. ಎಲ್‍ಇಡಿ ಬಲ್ಬ್‍ಗಳನ್ನು ಪೂರೈಸಲಾಗುತ್ತಿದ್ದು, ಈ ಬಾರಿ ಪಿನಿಕ್ಸ್ ಸಂಸ್ಥೆಯವರಿಗೆ ಗುತ್ತಿಗೆ ನೀಡಲಾಗಿದ್ದು, 50ರೂ.ಗೆ ಬಲ್ಬ್ ನೀಡಲು ನಿರ್ಧರಿಸಲಾಗಿದೆ. ನಗರ ಪ್ರದೇಶದಲ್ಲಿ ಹೆಚ್ಚಾಗಿ ಟ್ಯೂಬ್‍ಲೈಟ್ ಬಳಸುವುದರಿಂದ 750ರೂ. ದರದ ಎಲ್‍ಇಡಿ ಟ್ಯೂಬ್‍ಲೈಟನ್ನು 250ರೂ.ಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಪಂಚಾಯ್ತಿ, ನಗರಸಭೆ, ಪುರಸಭೆ, ಪಾಲಿಕೆಗಳಲ್ಲಿ ಬೀದಿ ದೀಪಗಳನ್ನು ಎಲ್‍ಇಡಿಗೆ ಬದಲಾಯಿಸಲಾಗುವುದು. 6 ಕೋಟಿ ಬಲ್ಬ್‍ಗಳಿಗೆ ಖರೀದಿ ಆದೇಶ ನೀಡಲಾಗಿದ್ದು, ಒಂದೂವರೆ ಕೋಟಿಯಷ್ಟು ಈವರೆಗೂ ರಾಜ್ಯದಲ್ಲಿ ಹಂಚಿಕೆ ಮಾಡಲಾಗಿದೆ ಎಂದರು.

ಈ ಮೊದಲು ವಿದ್ಯುತ್ ಖರೀದಿಯಲ್ಲಿ ಯುನಿಟ್‍ಗೆ 8ರೂ.ವರೆಗೂ ಖರ್ಚು ಮಾಡಲಾಗಿತ್ತು. ತಾವು ಸಚಿವರಾದ ನಂತರ ಅದನ್ನು 5ರೂ. ಆಜುಬಾಜಿನಲ್ಲೇ ಖರೀದಿ ಮಾಡಲಾಗಿದೆ. ಶಿವನಸಮುದ್ರದಲ್ಲಿ ಒಂದು ಸಾವಿರ ಕೋಟಿಗೂ ಮೇಲ್ಪಟ್ಟ ವಿದ್ಯುತ್ ಉತ್ಪಾದನೆ ಯೋಜನೆ ರೂಪಿಸಲಾಗಿದ್ದು, ನೆರೆ ರಾಜ್ಯಗಳಿಂದ ಈ ಯೋಜನೆಗೆ ನಿರಾಪೇಕ್ಷಣಪತ್ರ ಪಡೆಯುವ ಅನಿವಾರ್ಯತೆ ಇತ್ತು. ಜಲವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಎನ್‍ಒಸಿ ಕೊಡಲು ನಿರಾಕರಿಸಿದೆ. ಹೀಗಾಗಿ ಯೋಜನಾ ವೆಚ್ಚವನ್ನು 300ಕೋಟಿ ಒಳಗೆ ರೂಪಿಸಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಪಾವಗಡದ ಸೋಲಾರ್ ಪಾರ್ಕ್ ವಿಶ್ವದ ಗಮನ ಸೆಳೆದಿದೆ. ಒಂದು ಎಕರೆ ಭೂಮಿಯನ್ನೂ ಖರೀದಿ ಮಾಡದೆ ವಿಶ್ವದಲ್ಲೇ ಅತಿದೊಡ್ಡದಾದ ಸೋಲಾರ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಒಂದಲ್ಲಾ ಒಂದು ವಿದ್ಯುತ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನಲ್ಲೂ 20 ಮೆಗಾವ್ಯಾಟ್ ಸೋಲಾರ ವಿದ್ಯುತ್ ಉತ್ಪಾದಿಸಲು ಕ್ರಮ ಕೈಗೊಳ್ಳಲಾಗಿದೆ. ಸೂರ್ಯ ರೈತ ಯೋಜನೆಗೆ ವಿಶ್ವಬ್ಯಾಂಕ್‍ನ ಮೆಚ್ಚುಗೆ ಸಿಕ್ಕಿದೆ. ರೈತರು ಸೋಲಾರ್ ಪ್ಯಾನಲ್‍ಗಳನ್ನು ಅಳವಡಿಸಿಕೊಂಡು ಕೃಷಿಗೆ ವಿದ್ಯುತ್ ಬಳಕೆ ಮಾಡಿ ಮಿಕ್ಕ ದಿನಗಳಲ್ಲಿ ಉತ್ಪಾದಿಸುವ ವಿದ್ಯುತ್‍ತ್ತನ್ನು ಕೇಂದ್ರ ಜಾಲಕ್ಕೆ ಪೂರೈಸುವ ಈ ಯೋಜನೆ ಗಮನ ಸೆಳೆದಿದೆ ಎಂದು ಹೇಳಿದರು.ಸೋಲಾರ ವಿದ್ಯುತ್ ಉತ್ಪಾದನಾ ಯೋಜನೆಗೆ 25ಸಾವಿರ ಅರ್ಜಿಗಳು ಬಂದಿದ್ದವರು. ಎರಡು ವರ್ಷದಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಹೋಯಿತು ಎಂಬ ಆಕ್ಷೇಪಗಳು ಕೇಳಿ ಬಂದಿವೆ.

ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಪಾರದರ್ಶಕವಾಗಿ ಕ್ರಮ ತೆಗೆದುಕೊಂಡಿದ್ದೇನೆ. ಯಾವುದೇ ತನಿಖೆಗಾದರೂ ಸಿದ್ದನಿದ್ದೇನೆ ಎಂದರು.ವಿದ್ಯುತ್ ಇಲಾಖೆಯಲ್ಲಿ ಖಾಲಿ ಇದ್ದ ಶೇ.50ರಷ್ಟು ಹೆಚ್ಚು ಹುದ್ದೆಗಳಿಗೆ ಪಾರದರ್ಶಕ ನೇಕಾತಿಯಾಗುತ್ತಿದೆ. ಮೊದಲ ಹಂತದಲ್ಲಿ 14ಸಾವಿರ ಲೈನ್‍ಮೆನ್ ಮತ್ತು ಇಂಜಿನಿಯರ್‍ಗಳನ್ನು ನೇಮಿಸಲಾಗಿತ್ತು. ಎರಡನೇ ಹಂತದಲ್ಲಿ 11ಸಾವಿರ ಸಿಬ್ಬಂದಿ ನೇಮಕವಾಗುತ್ತಿದ್ದು, ಭಾರತೀಯ ವಿಜ್ಞಾನ ಸಂಸ್ಥೆ ಪರೀಕ್ಷೆ ನಡೆಸುತ್ತಿದೆ. ಕೆಪಿಟಿಸಿಎಲ್‍ನಿಂದ ಸುಮಾರು 898 ಕಾಮಗಾರಿಗಳು ಚಾಲನೆಯಲ್ಲಿವೆ. ವಿದ್ಯುತ್ ಸರಬರಾಜು ಮಾರ್ಗಗಳ ಸುಧಾರಣೆ, ಸಿಸಿ ಬ್ಯಾಂಕ್ ಸೇರಿದಂತೆ ಹಲವಾರು ಯೋಜನೆಗಳು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿವೆ. ಮೂರು ದಿನಗಳಲ್ಲಿ ದುರಸ್ತಿಯಾದ ಟೀಸಿಗಳನ್ನು ಬದಲಾವಣೆ ಮಾಡಿಕೊಡಲಾಗುತ್ತಿದೆ ಎಂದು ಡಿಕೆಶಿ ಹೇಳಿದರು.

Share here …

 

► Follow us on –  Facebook / Twitter  / Google+

Sri Raghav

Admin