ಬರಪೀಡಿತ ಪ್ರದೇಶಗಳಿಗೆ ವಿಶೇಷ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ
ಬೆಂಗಳೂರು, ಅ.13- ಬರಪೀಡಿತ ಪ್ರದೇಶಗಳಿಗೆ ವಿಶೇಷ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಮುಂದಿನ ವಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ. ಈಗಾಗಲೇ ರಾಜ್ಯದ 110 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದು, ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಂಭವವಿದೆ. ಘೋಷಣೆಯಾಗಿರುವ ಬರಪೀಡಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರದ ನೆರವು ಕೋರಿ ರಾಜ್ಯ ಸರ್ಕಾರ ಮನವಿ ಸಲ್ಲಿಸಲು ಸಿದ್ಧತೆ ನಡಸಿದೆ. ಮಳೆ ಕೊರತೆಯಿಂದಾಗಿ ಉಂಟಾಗಿರುವ ಬೆಳೆ ಹಾನಿಗೆ ಪರಿಹಾರ, ಜಾನುವಾರುಗಳಿಗೆ ಮೇವು, ಗುಳೇ ಹೋಗದಂತೆ ಜನರಿಗೆ ಉದ್ಯೋಗ ಒದಗಿಸುವುದು ಮೊದಲಾದ ಕಾರ್ಯಗಳಿಗೆ ಹೆಚ್ಚಿನ ನೆರವು ನೀಡುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಈ ವರ್ಷವೂ ಕೂಡ ಸುಮಾರು 2ಸಾವಿರ ಕೋಟಿಗೂ ಹೆಚ್ಚಿನ ಹಾನಿ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಜಿಲ್ಲಾವಾರು ಮಾಹಿತಿಯನ್ನು ಕಂದಾಯ ಇಲಾಖೆ ಕಲೆ ಹಾಕುತ್ತಿದ್ದು, ಮುಂದಿನ ವಾರದೊಳಗೆ ಕೇಂದ್ರ ಸರ್ಕಾರಕ್ಕೆ ಪರಿಹಾರ ಕೋರಿ ಸಲ್ಲಿಸಲಿರುವ ಮನವಿ ಪತ್ರ ಸಿದ್ಧವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸತತ ಬರದ ದವಡೆಗೆ ಸಿಲುಕುತ್ತಿರುವ ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಒಂದೆಡೆ ಜಲಕ್ಷಾಮ ಉಂಟಾಗಿ ಜಲಾಶಯಗಳು ಬರಿದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದೆಡೆ ಬಿತ್ತಿದ ಬೆಳೆಯೂ ರೈತರ ಕೈ ಸೇರದೆ ಒಣಗುತ್ತಿವೆ. ಹೀಗಾಗಿ ಬರಪೀಡಿತ ಪ್ರದೇಶಗಳಿಗೆ ಮಾರ್ಗಸೂಚಿ ಪ್ರಕಾರ ಪರಿಹಾರ ನೀಡುವುದರ ಜತೆಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಕೋರಿಕೆ ಸಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಕಳೆದ ವರ್ಷ ರಾಜ್ಯದಲ್ಲಿ ಬರದ ಛಾಯೆ ಆವರಿಸಿದ್ದು, 136 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿತ್ತು. ಸುಮಾರು ಏಳೂವರೆ ಸಾವಿರ ಕೋಟಿ ರೂ.ನಷ್ಟು ಹಾನಿ ಉಂಟಾಗಿದ್ದು, ಕೇಂದ್ರ ಸರ್ಕಾರಕ್ಕೆ ನೆರವು ನೀಡುವಂತೆ ಕೋರಲಾಗಿತ್ತು. ಎರಡು ಕಂತಿನಲ್ಲಿ ಕೇಂದ್ರ ಸರ್ಕಾರ ಎರಡು ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಪರಿಹಾರ ನೀಡಲಾಗಿತ್ತು. ಅದರಲ್ಲಿ ಬೆಳೆ ಪರಿಹಾರವಾಗಿ ರೈತರಿಗೆ ನೀಡುವ ಇನ್ಫುಟ್ ಸಬ್ಸಿಡಿ ಕೂಡ ಒಳಗೊಂಡಿತ್ತು. ರಾಜ್ಯ ಸರ್ಕಾರವು ಕೂಡ ಪರಿಹಾರವನ್ನು ರೈತರಿಗೆ ನೀಡಿತ್ತು. ಈಗ ಮತ್ತೆ ಮಳೆ ಅಭಾವದಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ನೆರವಿಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಲಿದೆ.