ಬರ ಪರಿಹಾರ : ರೈತರ ಖಾತೆಗೆ ಜಮೆ ಮಾಡಿ
ರೋಣ,ಫೆ.28- ಹಿಂದಿನ ಸಭೆಯಲ್ಲಿ ಚರ್ಚೆಯಾದ ವಿಷಯಗಳು ಕಾರ್ಯರೂಪಕ್ಕೆ ಬರಬೇಕು, ಅಧಿಕಾರಿಗಳು ತಮ್ಮ ಕೆಲಸವನ್ನು ಕಟ್ಟುನಿಟ್ಟಿನಿಂದ ಪಾಲನೆ ಮಾಡಬೇಕು ಎಂದು ತಾಪಂ ಇಓ ಎಮ್.ವಿ. ಚಳಗೇರಿ ಹೇಳಿದರು.ತಾಪಂ ಸಭಾಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ತಾಲೂಕಿನ ವಿವಿಧ ಇಲಾಖೆ ಮುಖ್ಯಸ್ಥರುಗಳಿಗೆ ಅವರು ಈ ರೀತಿ ಖಡಕ್ ಎಚ್ಚರಿಕೆ ನೀಡಿದರು. ಪ್ರತಿ ಸಭೆಗೆ ಹಾಜರಾಗುವ ಅಧಿಕಾರಿಗಳು ಹಿಂದಿನ ಸಾಮಾನ್ಯ ಸಭೆಯಲ್ಲಿ ಪಾಸಾದ ನಡುವಳಿಕೆಯ ವಿಷಯಗಳು ಕಾರ್ಯರೂಪಕ್ಕೆ ಬರಬೇಕು. ಅಂದಾಗ ಮುಂದಿನ ವಿಷಯದ ಬಗ್ಗೆ ಚರ್ಚಿಸಲು ಸಹಾಯವಾಗುತ್ತದೆ ಎಂದು ಅವರು ತಿಳಿಸಿದರು.ಆಗ ಮಧ್ಯೆ ಪ್ರವೇಶಿಸಿ ಮಾತನಾಡಿದ ತಾಪಂ ಸದಸ್ಯ ಪ್ರಭು ಮೇಟಿ ತಾಲೂಕಿನ ಶಿಶು ಅಭಿವೃದ್ದಿ ಇಲಾಖೆಗೆ ವಾರ್ಷಿಕ 713 ಲಕ್ಷ ಅನುದಾನ ನೀಡುತ್ತಿದ್ದು, ಸಿಡಿಪಿಓ ನಾಗನಗೌಡ ಪಾಟೀಲ ಅವರಿಗೆ ಪ್ರತಿ ಬಾರಿ ಆಗಮಿಸುವಾಗ ಪ್ರತಿ ತಿಂಗಳು ಎಷ್ಟು ಆಹಾರ ದಾನ್ಯ ವಿತರಣಿಯಾಗುತ್ತಿದೆ? ಉಳಿದ ಆಹಾರ ದಾನ್ಯಗಳ ಮಾಹಿತಿ ಕೊಡಿ? ಎಂದು ಕಳೆದ ಐದಾರು ತಿಂಗಳಿನಿಂದ ಸಂಪೂರ್ಣ ಮಾಹಿತಿಯನ್ನು ನೀಡಿ ಎಂದು ಕೇಳುತ್ತಿದ್ದರೂ ಯಾಕೆ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು.
ಆಗ ಸಿಡಿಪಿಓ ಮುಂದಿನ ಬಾರಿಯ ಸಭೆಗೆ ಮಾಹಿತಿಯನ್ನು ನೀಡುತ್ತೇನೆ ಎಂದು ಸಬೂಬು ಹೇಳಿ ಬೀಸೋ ದೊಣ್ಣಿಯಿಂದ ತಪ್ಪಿಸಿಕೊಂಡರು. ನಂತರ ಜಗದೀಶ ಬ್ಯಾಡಗಿ ಮಾತನಾಡಿ ಪ್ರತಿ ತಾಪಂ ಸದಸ್ಯರ ವ್ಯಾಪ್ತಿಯ ಅಂಗನವಾಡಿ ಕೇಂದ್ರ, ಅಕ್ಷರದಾಸೋಹದ ಆಹಾರ ಧಾನ್ಯ ವಿತರಿಸುವಾಗ ಆ ಭಾಗದ ಸದಸ್ಯರ ಗಮನಕ್ಕೆ ಒಂದು ದಿನ ಮುಂಚಿತವಾಗಿ ತಿಳಿಸಬೇಕು ಎಂದು ಹೇಳಿದರು.ತಾಲೂಕಿನಲ್ಲಿ ಕಳೆದ ಐದಾರು ವರ್ಷಗಳಿಂದ ಬೀಕರ ಬರಗಾಲ ಆವರಿಸಿದ್ದು, ಜಾನುವಾರುಗಳಿಗೆ ನೀರು, ಮೇವು ಸಮರ್ಪಕವಾಗಿ ಒದಗಿಸಬೇಕು, ಬರಪರಿಹಾರವನ್ನು ಎಲ್ಲ ರೈತರ ಖಾತೆಗಳಿಗೆ ಶೀಘ್ರವೇ ಜಮೆ ಮಾಡಬೇಕು ಎಂದು ಸದಸ್ಯರು ಒಕ್ಕೂರಲ ಧ್ವನಿಯಲ್ಲಿ ಆಗ್ರಹಿಸಿದರು.
ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಸರಿಯಾದ ಸಮಯಕ್ಕೆ ಹಾಜರಾಗದೆ ಬೇಕಾಬಿಟ್ಟಿಯಾಗಿ ಕೆಲಸಕ್ಕೆ ಬರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ವೆ ಇಲಾಖೆಗೆ ರೈತರು ಜಮೀನಿನ ಅಳತೆ ಮಾಡಲು ವರ್ಷದ ಹಿಂದೆ ಅರ್ಜಿ ಸಲ್ಲಿಸಿದರೆ ಅವುಗಳನ್ನು ಪರಿಶೀಲನೆ ಮಾಡುತ್ತಿಲ್ಲ. ಅಧಿಕಾರಿಗಳಿಗೆ ನೇರವಾಗಿ ಭೇಟಿಯಾಗಿ ಹಣ ನೀಡಿದರೆ ಐದಾರು ದಿನಗಳಲ್ಲಿ ಅಳತೆ ಮಾಡುತ್ತಿದ್ದಾರೆ. ಈ ಎಲ್ಲ ಅವ್ಯವಸ್ಥೆಗಳನ್ನು ನಿಯಂತ್ರಿಸಬೇಕು ಎಂದು ತಾಪಂ ಸದಸ್ಯ ಪ್ರಭು ಮೇಟಿ ಪ್ರಶ್ನಿಸಿದರು?
ಅದಕ್ಕೆ ಉತ್ತರ ನೀಡಿದ ತಹಶೀಲ್ದಾರ್ ಶಿವಲಿಂಗಪ್ರಬು ವಾಲಿ ಇನ್ನು ಮುಂದೆ ಇಂಥ ಘಟನೆಗಳು ಮರುಕಳಿಸದ ಬಗ್ಗೆ ಮುಂಜಾಗ್ರತೆ ವಹಿಸಲಾಗುವುದು ಎಂದರು.ಹೊಳೆಆಲೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ 108 ಅಂಬುಲೆನ್ಸ ವಾಹನದವರು ಮೆಣಸಗಿ ಗ್ರಾಮಕ್ಕೆ ರೋಗಿಯನ್ನು ಕರೆದುಕೊಂಡು ಹೋದಾಗ ರೋಗಿಗಳ ಕಡೆಯವರಿಂದ ಹಣ ಪಡೆದುಕೊಂಡಿದ್ದಾರೆ. ಹಣ ಪಡೆಯುವ ನಿಯಮವಿದೆಯೇ? ಎಂದು ತಾಪಂ ಸದಸ್ಯ ಜಗದೀಶ ಬ್ಯಾಡಗಿ ಕೇಳಿದರು.ಆಗ ತಾಲೂಕು ವೈದ್ಯಾಧಿಕಾರಿ ಸಿಬ್ಬಂದಿ ಸಭೆಗೆ ಹಾಜರಾಗಿದ್ದರಿಂದ ಅವರಲ್ಲಿ ಸಮರ್ಪಕ ಉತ್ತರ ಇಲ್ಲದಿರುವುದರಿಂದ ಎಲ್ಲ ಸದಸ್ಯರು ಯಾಕೆ ಸಭೆಗೆ ಹಾಜರಾಗಿದ್ದೀರಿ? ಎಂದು ಅಸಮಾದಾನ ವ್ಯಕ್ತಪಡಿಸಿದರು.ತಾಪಂ ಸದಸ್ಯ ವಿರುಪಾಕ್ಷಗೌಡ ಪಾಟೀಲ ಮಾತನಾಡಿ, ತಾಲೂಕ ಸಾಮಾಜಿಕ ಅರಣ್ಯ ಅಧಿಕಾರಿಗಳಿಗೆ ಸದಸ್ಯರು ಕರೆ ಮಾಡಿದರೆ ಅವರು ಕರೆ ಸ್ವೀಕರಿಸುವುದಿಲ್ಲ. ಸಾರ್ವಜನಿಕರ ಗೋಳನ್ನು ಹೇಗೆ ಕೇಳುತ್ತೀರಿ? ಎಂದು ಸಾಮಾಜಿಕ ಅರಣ್ಯಧಿಕಾರಿ ಖೋತಾ ಅವರನ್ನು ತರಾಟಿಗೆ ತಗೆದುಕೊಂಡರು.
ಅರಣ್ಯಧಿಕಾರಿಗಳು ತಾಲೂಕಿನಲ್ಲಿ ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಎಲ್ಲ್ಲೆಂದರಲ್ಲೇ ಗಿಡಮರಗಳನ್ನು ಕಳ್ಳರು ಕಡಿದುಕೊಂಡು ಹೋಗುತ್ತಿದ್ದರೆ ನೀವು ಏನು ಮಾಡುತ್ತಿದ್ದೀರಿ? ಅವರ ಮೇಲೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ತಾಪಂ ಸದಸ್ಯ ಪ್ರಭು ಮೇಟಿ ಪ್ರಶ್ನಿಸಿದರು.ಆಗ ಅರಣ್ಯಧಿಕಾರಿ ರಂಗಣ್ಣವರ ಅವರಲ್ಲಿ ಸೂಕ್ತ ಉತ್ತರ ಇರದೆ ಇರುವುದರಿಂದ ಸಬೂಬು ನೀಡಿದರು.ಸಭೆಯಲ್ಲಿ ತಾಪಂ ಅಧ್ಯಕ್ಷೆ ಪ್ರೇಮವ್ವ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎಪ್. ತರಫದಾರ, ತಹಶೀಲ್ದಾರ್ ಶಿವಲಿಂಗಪ್ರಬು ವಾಲಿ, ಬೇವಿನಮರದ, ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
< Eesanje News 24/7 ನ್ಯೂಸ್ ಆ್ಯಪ್ >