ಬಲಿಗಾಗಿ ಬಾಯ್ತೆರೆದು ಕಾದು ಕೂತಿದೆ ಕೊಳವೆಬಾವಿ..!

Borewell--01

ತುಮಕೂರು, ಏ.26-ಬೆಳಗಾವಿಯ ಝಂಜರವಾಡ ಗ್ರಾಮದಲ್ಲಿ ಬಾಲಕಿಯ ಬಲಿ ಪಡೆದ ಕೊಳವೆಬಾವಿ ಮಾದರಿಯಲ್ಲೇ ಜಿಲ್ಲೆಯ ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾ.ಪಂ.ವ್ಯಾಪ್ತಿಯಲ್ಲಿ ತೆರೆದ ಕೊಳವೆಬಾವಿ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ.  ಬಂಡೆಹಳ್ಳಿಯ ರಸ್ತೆ ಪಕ್ಕದಲ್ಲೇ ಕಳೆದ ಆರು ವರ್ಷಗಳ ಹಿಂದೆ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯ್ತಿಯಿಂದ ಕೊರೆಸಲಾಗಿದ್ದ ಕೊಳವೆ ಬಾವಿಯನ್ನು ಮುಚ್ಚದೆ ಬಿಟ್ಟಿರುವುದು ಈ ಆತಂಕಕ್ಕೆ ಕಾರಣ. ಸುಮಾರು 30 ಅಡಿ ಆಳ, 2 ಅಡಿ ಅಗಲವಿರುವ ಈ ಕೊಳವೆ ಬಾವಿ ಮುಚ್ಚುವಂತೆ ಹಲವಾರು ಬಾರಿ ಸಾರ್ವಜನಿಕರು ಮನವಿ ಮಾಡಿದ್ದರೂ ಪಂಚಾಯ್ತಿ ಅಧಿಕಾರಿಗಳು ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.ಒಂದು ಅಡಿ ಅಗಲದ ಕೊಳವೆ ಬಾವಿಗಳಲ್ಲೇ ಸಣ್ಣ ಮಕ್ಕಳು ಬಿದ್ದ ಘಟನೆಗಳು ಸಾಕಷ್ಟು ಇರುವ ನಡುವೆಯೂ ಇಂತಹ ನಿರ್ಲಕ್ಷ್ಯತನ ಪ್ರದರ್ಶಿಸುತ್ತಿರುವ ಗ್ರಾ.ಪಂ. ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಖಾಸಗಿಯಾಗಲಿ ಅಥವಾ ಪಂಚಾಯ್ತಿ ವತಿಯಿಂದಾಗಲಿ ಕೊಳವೆ ಬಾವಿಗಳನ್ನು ತೆರೆದಾಗ ನೀರು ಬಾರದಿದ್ದಲ್ಲಿ ಅದನ್ನು ಮುಚ್ಚಬೇಕು ಎಂಬ ಆದೇಶವಿದ್ದರೂ ಅದನ್ನು ಯಾರೂ ಪಾಲಿಸದ ಪರಿಣಾಮ ಅಮಾಯಕ ಮಕ್ಕಳು ಬಲಿಯಾಗುತ್ತಿದ್ದಾರೆ. ಏನೂ ಅರಿಯದ ಮಕ್ಕಳು ತಮ್ಮ ಆಟದಲ್ಲಿ ತಲ್ಲೀನರಾಗಿದ್ದಾಗ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಈ ಬಗ್ಗೆ ಅರಿವಿರುವ ಹಿರಿಯರೇ ಎಚ್ಚೆತ್ತುಕೊಳ್ಳದಿದ್ದರೆ ಮಕ್ಕಳನ್ನು ರಕ್ಷಿಸುವವರು ಯಾರು? ಎಂಬ ಪ್ರಶ್ನೆ ಕಾಡುತ್ತದೆ.

ಕೊರಟಗೆರೆ ತಾಲೂಕಿನ ಕುರಂಕೋಟೆ ಗ್ರಾ.ಪಂ. ವ್ಯಾಪ್ತಿಯ ಈ ಕೊಳವೆ ಬಾವಿ ಸಹ ಮತ್ತೊಂದು ಬಲಿಗೆ ಬಾಯ್ದೆರೆದು ಕುಳಿತಿದೆಯೇ ಎಂಬಂತೆ ಭಾಸವಾಗುತ್ತಿದೆ. ರಸ್ತೆ ಪಕ್ಕದಲ್ಲೇ ಇರುವ ಇಂತಹ ಕೊಳವೆ ಬಾವಿಗಳನ್ನು ಕೂಡಲೇ ಮುಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin