ಬಲೂಚ್ ಪ್ರತಿಭಟನೆ ಹತ್ತಿಕ್ಕಲು ಪಾಕ್ ಯೋಧರ ‘ಅತ್ಯಾಚಾರ ಅಸ್ತ್ರ’
ನವದೆಹಲಿ, ಸೆ.23-ಸ್ವಾತಂತ್ರ್ಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಪಾಕಿಸ್ತಾನ ಆಕ್ರಮಿತ ಬಲೂಚ್ ನಾಗರಿಕರ ಹೋರಾಟವನ್ನು ಹತ್ತಿಕ್ಕಲು ಪಾಕ್ ಯೋಧರು ಅಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡುತ್ತಿರುವ ಪ್ರಕರಣಗಳು ಬಹಿರಂಗಗೊಂಡಿದೆ. ಅಲ್ಲದೇ ಮುಗ್ಧ ಜನರ ಮೇಲೆ ಯುದ್ಧ ಟ್ಯಾಂಕ್ಗಳು ಮತ್ತು ಸಮರ ವಿಮಾನಗಳಿಂದ ದಾಳಿ ನಡೆಸಲಾಗುತ್ತಿದೆ ಎಂಬ ಆತಂಕಕಾರಿ ಸಂಗತಿಯೂ ಬೆಳಕಿಗೆ ಬಂದಿದೆ. ಬಲೂಚಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರೋತ್ಸವ ಭಾಷಣದಲ್ಲಿ ಪ್ರಸಾಪಿಸಿದ ನಂತರ ಅನೇಕರು ಪಾಕಿಸ್ತಾನ ಸೇನಾಪಡೆಗಳು ಮತ್ತು ಇಂಟರ್-ಸರ್ವಿಸಸ್ ಇಂಟಲಿಜೆನ್ಸ್ ಎಸಗುತ್ತಿರುವ ಭಯಾನಕ ಹಿಂಸಾಚಾರಗಳ ಕರಾಳ ಮುಖಗಳನ್ನು ಬಯಲಿಗೆಳೆಯುತ್ತಿದ್ದಾರೆ.
ಪಾಕ್ ಯೋಧರು ಮತ್ತು ಐಎಸ್ಐ ಸಿಬ್ಬಂದಿ ಬಲೂಚ್ ಮಹಿಳೆಯರನ್ನು ಅಕ್ರಮ ಬಂಧನದಲ್ಲಿಟ್ಟು, ಕ್ರೂರ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ತಮ್ಮ ಹೆಸರನ್ನು ಬಹಿರಂಗಗೊಳಿಸಲು ಇಚ್ಚಿಸದ ಮಹಿಳೆಯೊಬ್ಬಳು ಹೇಳಿದ್ದಾರೆ.
ಬಲೂಚಿಸ್ತಾನದ ವಕೀಲರು, ವೈದ್ಯರು, ಶಿಕ್ಷಕರನ್ನು ಸಹ ಅಪಹರಿಸಿ ಚಿತ್ರಹಿಂಸೆ ನೀಡಿಲಾಗಿದ್ದು, ಕೆಲವರ ಮೃತದೇಹಗಳು ನಿರ್ಜನ ಪ್ರದೇಶಗಳಲ್ಲಿ ಪತ್ತೆಯಾಗಿವೆ. ದೆರಾ ಬುಗ್ಟಿ ಪ್ರದೇಶದಲ್ಲಿ ಕಳೆದ ಎರಡು ವಾರಗಳ ಹಿಂದೆ ಪಾಕ್ ಯೋಧರು 50ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳನ್ನು ಅಪಹರಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಲೂಚಿಸ್ತಾನ ಪಾಕ್ ಸೇನಾಪಡೆಯ ದೌರ್ಜನ್ಯ ಮತ್ತು ಹಿಂಸಾಚಾರದಿಂದ ನಲುಗಿ ಹೋಗಿದ್ದು, ಅಲ್ಲಿನ ನಾಗರಿಕರು ನೆರವಿಗಾಗಿ ಭಾರತಕ್ಕೆ ಮನವಿ ಮಾಡುತ್ತಿದ್ದಾರೆ.
► Follow us on – Facebook / Twitter / Google+