ಬಸ್ ನಲ್ಲಿ 5 ಲಕ್ಷ ರೂ. ಹಣವಿದ್ದ ಡಿವೈಎಸ್ಪಿಯ ಬ್ಯಾಗನ್ನೇ ಎಗರಿಸಿದ ಕಳ್ಳರು..!
ದಾವಣಗೆರೆ, ಮೇ 23– ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ 5 ಲಕ್ಷ ರೂ. ಹಣವಿದ್ದ ಬ್ಯಾಗನ್ನು ಕಳ್ಳರು ಅಪಹರಿಸಿರುವ ಘಟನೆ ಹರಪ್ಪನಹಳ್ಳಿ ತಾಲ್ಲೂಕಿನ ಹಲುವಾಗಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತೆಲಂಗಾಣ ರಾಜ್ಯದ ಹೈದರಾಬಾದ್ನ ಲಕ್ಡೀಕಾಪೊಲನ್ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿಯಾಗಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಅವರೇ ಹಣ ಕಳೆದುಕೊಂಡಿರುವ ಪೊಲೀಸ್ ಅಧಿಕಾರಿ. ಕಳೆದ ಮೇ 18ರಂದು ಸಂಬಂಧಿಕರ ಮದುವೆಗೆಂದು ಹೈದರಾಬಾದ್ನಿಂದ ಸಿಂಧನೂರಿಗೆ ಬಂದು 19ರಂದು ಕಾರಟಗಿಯಲ್ಲಿ ವಿವಾಹ ಮುಗಿಸಿಕೊಂಡು ದಾವಣಗೆರೆಯಲ್ಲಿ ವಾಸವಿರುವ ಅತ್ತೆ ಮನೆಗೆ ಬಂದಿದ್ದರು.
ನಿನ್ನೆ ಮಾವನ ಬಳಿಯಿಂದ 2 ಲಕ್ಷ ರೂ. ಮುಖ ಬೆಲೆಯ 5 ಲಕ್ಷ ರೂ. ಹಣವನ್ನು ಪಡೆದುಕೊಂಡು ಬ್ಯಾಗ್ನಲ್ಲಿಟ್ಟುಕೊಂಡು ಹೈದರಾಬಾದ್ಗೆ ಖಾಸಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಹರಿಹರ ಮಾರ್ಗವಾಗಿ ದುಗ್ಗಾವತಿ ಬಳಿ ಬರುತ್ತಿದ್ದಂತೆ ಬಸ್ ಚಾಲಕ ಊಟಕ್ಕೆಂದು ಬಸ್ ನಿಲ್ಲಿಸಿದ್ದಾರೆ. ಜಗದೀಶ್ ಹಣವಿದ್ದ ಬ್ಯಾಗನ್ನು ಬಸ್ನಲ್ಲಿಟ್ಟು ಟೀ ಕುಡಿಯಲೆಂದು ಹೊಟೇಲ್ ಬಳಿ ಹೋಗಿ 5 ನಿಮಿಷದೊಳಗೆ ಬಸ್ ಬಳಿ ಬಂದು ನೋಡಿದಾಗ ಹಣವಿದ್ದ ಬ್ಯಾಗ್ ಕಳ್ಳತನವಾಗಿತ್ತು. ಈ ಸಂಬಂಧ ಹಲವಾಗಲು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋಧ ಕೈಗೊಂಡಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >