ಬಸ್ ನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದಯಾಘಾತದಿಂದ ಪತ್ರಕರ್ತ ಸಾವು

Bus--02

ಉಪ್ಪಿನಂಗಡಿ,ನ.17-ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್‍ಆರ್‍ಟಿಸಿಯ ವೋಲ್ವೊ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತ ಡಿ.ಯದೀಶ್ (60) ಹೃದಘಾತಕ್ಕೀಡಾಗಿ ಬಸ್‍ನಲ್ಲೇ ಸಾವನ್ನಪ್ಪಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೆಂಗಳೂರಿನ ಕರ್ನಾಟಕ ರಾಜಕೀಯ ಎಂಬ ಪತ್ರಿಕೆಯ ವರದಿಗಾರರಾಗಿರುವ ಯದೀಶ್ ಕಾರ್ಯನಿಮಿತ್ತ ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಬಸ್‍ನಲ್ಲಿದ್ದ ಪ್ರಯಾಣಿಕರೊಬ್ಬರನ್ನು ಉಪ್ಪಿನಂಗಡಿಯಲ್ಲಿ ಇಳಿಸಲು ಯತ್ನಿಸಿದ ವೇಳೆ ಕುಳಿತಲ್ಲಿಯೇ ಒಂದೇ ಭಂಗಿಯಲ್ಲಿ ನಿದ್ರಾಸ್ಥಿತಿಯಲ್ಲಿದ್ದ ಯದೀಶ್ ಅವರ ಬಗ್ಗೆ ಸಂಶಯಗೊಂಡ ಬಸ್ ನಿರ್ವಾಹಕ ಅವರನ್ನು ಪರಿಶೀಲಿಸಿ ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ.
ಕೂಡಲೇ ಬಸ್‍ನ್ನು ಉಪ್ಪಿನಂಗಡಿ ಠಾಣೆಗೆ ತಂದು ಪೊಲೀಸರಿಗೆ ಮಾಹಿತಿ ನೀಡಲಾಯಿತು. ತಕ್ಷಣವೇ ಪೊಲೀಸರು ಮೊಬೈಲ್ ಮೂಲಕ ಮೃತರ ಬಂಧುಗಳನ್ನು ಸಂಪರ್ಕಿಸಿ ಮೃತ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಶವಾಗಾರದಲ್ಲಿರಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Sri Raghav

Admin