ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

Spread the love

Election-Campaign

ಬೆಂಗಳೂರು, ಮೇ 9- ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಅಂತಿಮ ತೆರೆ ಬೀಳಲಿದೆ. ಮತದಾರರಲ್ಲದವರು ನಾಳೆ ಸಂಜೆಯೊಳಗೆ ಕ್ಷೇತ್ರ ಬಿಟ್ಟು ತೆರಳಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಸಚಿವರು, ರಾಜ್ಯದಲ್ಲಿ ಬೀಡು ಬಿಟ್ಟಿರುವ ಹಲವು ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಬಿಎಸ್‍ಪಿ, ಸಿಪಿಐ, ಸಿಪಿಐ(ಎಂ), ಎಐಎಂಐಎಂ ಮುಖಂಡರು ನಾಳಿನ ಚುನಾವಣಾ ಪ್ರಚಾರ ಕಾರ್ಯ ಮುಗಿಸಿ ಹಿಂದಿರುಗಲಿದ್ದಾರೆ. ಇನ್ನೇನಿದ್ದರೂ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಿ ಮತದಾರರ ಮನ ಗೆಲ್ಲಬೇಕಾಗಿದೆ. ಅಬ್ಬರದ ಪ್ರಚಾರ, ಮೈಕಾಸುರನ ಹಾವಳಿ ನಾಳೆ ತಗ್ಗಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೂ ನಾಳೆ ಸಂಜೆ ನಂತರ 48 ಗಂಟೆಗಳ ಮುಂಚೆ ನಿಷೇಧ ಬೀಳಲಿದೆ.   ವಿವಿಧ ಪಕ್ಷಗಳ ಮುಖಂಡರು, ರಾಜ್ಯದ ವಿವಿಧೆಡೆ ಅಂತಿಮ ಹಂತದ ಚುನಾವಣಾ ಪ್ರಚಾರ ನಡೆಸಿದರು.  ನಾಡಿನ ಮತದಾರರನ್ನು ಓಲೈಸಿಕೊಳ್ಳಲು ನಾಯಕರೆಲ್ಲ ಬಿಸಿಲಿನಲ್ಲಿ ಬೆವರಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಬಂಗಾರಪೇಟೆ, ಚಿಕ್ಕಮಗಳೂರು, ಬೆಳಗಾವಿ ಮತ್ತು ಬೀದರ್‍ನಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರ ನಡೆಸಿದರು.  ಭಾರೀ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷವನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಬೆಂಗಳೂರಿನಲ್ಲಿ ಮಿಂಚಿನ ಸಂಚಾರ ನಡೆಸಿದರು.ಇಂದು ಬೆಳಗ್ಗೆ ಬಸವನಗುಡಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದರು. ನಂತರ ಹೊಸೂರು ರಸ್ತೆಯಲ್ಲಿ ಗಾರ್ಮೆಂಟ್ಸ್ ಮಹಿಳಾ ನೌಕರರೊಂದಿಗೆ ಸಂವಾದ ನಡೆಸಿದರು.ಮಧ್ಯಾಹ್ನ ಎಚ್‍ಎಎಲ್ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಅಭ್ಯರ್ಥಿಗಳ ಪರ ಮತ ನೀಡುವಂತೆ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ಹರಿಹಾಯ್ದರು. ಯಾವುದೇ ಭರವಸೆಗಳನ್ನು ಈಡೇರಿಸದ ಮೋದಿಯವರನ್ನು ಜನ ಮುಂದಿನ ಚುನಾವಣೆಯಲ್ಲಿ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.   ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗ್ಗೆ 7 ರಿಂದ ಸಂಜೆ 7ರವರೆಗೆ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಅಂತಿಮ ಹಂತದ ಪ್ರಚಾರ ನಡೆಸಿದರು. ಸುಮಾರು ಹಳ್ಳಿಗಳಿಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕನಕಪುರ, ರಾಮನಗರ, ಚನ್ನಪಟ್ಟಣ ಮುಂತಾದ ಕಡೆ ಅಬ್ಬರದ ಪ್ರಚಾರ ನಡೆಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗುಳೇದಗುಡ್ಡ, ಬಾದಾಮಿ ಮುಂತಾದ ಕಡೆ ಮತಪ್ರಚಾರ ಮಾಡಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ತುಮಕೂರು, ಬೆಂಗಳೂರಿನಲ್ಲಿ ರೋಡ್‍ಶೋ ನಡೆಸಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಲ್ಲಿ ದಿನವಿಡೀ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‍ಸಿಂಗ್ ಚೌಹಾಣ್ ತೆರದಾಳ, ಗುಬ್ಬಿ ವಿಧಾನಸಭಾ ಕ್ಷೇತ್ರದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹಿರೇಕೆರೂರು, ರಾಣೆಬೆನ್ನೂರು, ಹೊಸಪೇಟೆ, ಅತ್ತಿಬೆಲೆ, ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರ ನಡೆಸಿದರು.

ಕೇಂದ್ರ ಸಚಿವ ಅನಂತ್‍ಕುಮಾರ್, ಸಾಗರ, ಶಿರಸಿ, ಹುಬ್ಬಳ್ಳಿ ಸೆಂಟ್ರಲ್, ಹುಬ್ಬಳ್ಳಿ-ಧಾರವಾಡ ಕ್ಷೇತ್ರಗಳಲ್ಲಿ ಮತ ಪ್ರಚಾರ ನಡೆಸಿದರೆ, ಡಿ.ವಿ.ಸದಾನಂದಗೌಡರು ಬೆಂಗಳೂರಿನ ಹೆಬ್ಬಾಳ,ಗೋವಿಂದರಾಜನಗರ, ಯಶವಂತಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಮತಯಾಚನೆ ಮಾಡಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬಿಜೆಪಿ ಅಭ್ಯರ್ಥಿ ನೆ.ಲ.ನರೇಂದ್ರಬಾಬು ಪರ ಮತಯಾಚನೆ ಮಾಡಿದರು. ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿ, ಮಹದೇವಪುರ, ನೆಲಮಂಗಲ ಮುಂತಾದೆಡೆ ಸಮಾವೇಶದಲ್ಲಿ ಪಾಲ್ಗೊಂಡು ಮಾತಯಾಚನೆ ನಡೆಸಿದರು.

ಒಟ್ಟಾರೆ ಎಲ್ಲಾ ಪಕ್ಷದ ಮುಖಂಡರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಕೊನೆ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಮೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾರ ಯಾರ ಕೈ ಹಿಡಿಯಲಿದ್ದಾರೆ, ಯಾರಿಗೆ ತಮ್ಮ ಒಲವು ವ್ಯಕ್ತಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin